ಹೀರೆಕಾಯಿ - Ridge Gourd

ಹೀರೆಕಾಯಿಯ ಪೌಷ್ಠಿಕ ಅಡುಗೆಗಳು

ಹೀರೆಕಾಯಿ ಉತ್ತಮ ಪೌಷ್ಠಿಕಾಂಶಗಳಿಂದ ಕೂಡಿದ ಶಕ್ತಿವರ್ಧಕ ತರಕಾರಿ. ಬೇಯಿಸಿದ ಹೀರೆಕಾಯಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುವುದು. ಹೀರೆಕಾಯಿ ಕ್ಷಯ ಮಧುಮೇಹ ಕೆಮ್ಮು ದಮ್ಮು ರೋಗಿಗಳಿಗೆ ಉತ್ತಮ ಆಹಾರ. ಇದರ ಸಿಪ್ಪೆಯಲ್ಲಿಯೂ ಪೌಷ್ಠಿಕಾಂಶಗಳಿವೆ.

ಹೀರೆಕಾಯಿ ಸಿಪ್ಪೆ ದೋಸೆ

ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ 1/2 ಕಪ್ ಹೆಸರುಬೇಳೆ, 1/2 ಕಪ್ ಎಳೆ ಹೀರೆಕಾಯಿ ಸಿಪ್ಪೆ, 1-2 ಹಸಿಮೆಣಸು, 1 ಚಮಚ ಜೀರಿಗೆ, 1/4" ಉದ್ದದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, 1/4 ಚಮಚ ಅರಸಿನ

ಮಾಡುವ ವಿಧಾನ : ಬೆಳ್ತಿಗೆ ಅಕ್ಕಿ ಮತ್ತು ಹೆಸರುಬೇಳೆ 2 ಗಂಟೆ ನೆನೆಸಿ. ನಂತರ ಹೀರೆಸಿಪ್ಪೆ, ಶುಂಠಿ, ಹಸಿಮೆಣಸು, ಜೀರಿಗೆ ಮತ್ತು ಅರಿಸಿನ ಸೇರಿಸಿ ರುಬ್ಬಿ. ನಂತರ ಅಕ್ಕಿ ಹೆಸರುಬೇಳೆ ಮಿಶ್ರಣ ತೊಳೆದು ರುಬ್ಬಿದ ಹೀರೆಸಿಪ್ಪೆ ಮಿಶ್ರಣಕ್ಕೆ ಸೇರಿಸಿ ನಯವಾಗಿ ರುಬ್ಬಿ. ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ನಂತರ ತವಾ ಒಲೆಯ ಮೇಲಿಟ್ಟು, ಎಣ್ಣೆಪಸೆ ಮಾಡಿ, ದೋಸೆ ಹುಯ್ದು, ಎರಡೂ ಬದಿ ಕೆಂಪಗೆ ಬೇಯಿಸಿ. ಈಗ ರುಚಿಯಾದ ದೋಸೆ ಚಟ್ನಿಯೊಂದಿಗೆ ಸವಿಯಲು ಸಿದ್ಧ.








ಹೀರೆಕಾಯಿ ತೊವ್ವೆ


 ಬೇಕಾಗುವ ವಸ್ತುಗಳು: 1 ಕಪ್ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಹೀರೆಕಾಯಿ, 1/2 ಕಪ್ ಹೆಸರುಬೇಳೆ , ಸಣ್ಣಗೆ ಹೆಚ್ಚಿದ ಒಂದು ಟೊಮೆಟೊ, 2-3 ಹಸಿಮೆಣಸು, 1"ಉದ್ದದ ಶುಂಠಿ, 1/2 ಲಿಂಬೆಹಣ್ಣು, ಚಿಟಿಕಿ ಅರಸಿನ, 1 ಚಮಚ ಎಣ್ಣೆ, 1/2 ಚಮಚ ಸಾಸಿವೆ, ಸ್ವಲ್ಪ ಕೊತ್ತಂಬರಿಸೊಪ್ಪು,  1 ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಹೆಸರುಬೇಳೆ ತೊಳೆದು, ಅರಸಿನ, 1/2 ಚಮಚ ಎಣ್ಣೆ, ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಿ. ನಂತರ ಬೆಂದ ಬೇಳೆಗೆ ಹೆಚ್ಚಿದ ಹೀರೆಕಾಯಿ ತುಂಡು, ಟೊಮೆಟೊ, ಉಪ್ಪು ಸೇರಿಸಿ ಕುದಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಹಸಿಮೆಣಸಿನ ಚೂರು, ಶುಂಠಿ ಚೂರು, ಕರಿಬೇವು ಹಾಕಿ ಹುರಿದು ಕುದಿಸಿದ ಹೀರೆ ಮತ್ತು ಹೆಸರುಬೇಳೆ ಮಿಶ್ರಣಕ್ಕೆ ಸೇರಿಸಿ. ನಂತರ ಕೊತ್ತಂಬರಿ ಸೊಪ್ಪಿನ ಚೂರು, ಲಿಂಬೆರಸ ಸೇರಿಸಿ. ಊಟದ ಜೊತೆ ತಿನ್ನಲು ರುಚಿಯಾಗಿರುತ್ತದೆ, ಚಪಾತಿಗೂ ಹೊಂದಿಕೆಯಾಗುತ್ತದೆ.








ಹೀರೆಕಾಯಿ ರೊಟ್ಟಿ



ಬೇಕಾಗುವ ವಸ್ತುಗಳು: 1/4 ಕಪ್ ಅಕ್ಕಿಹಿಟ್ಟು, 1/4 ಕಪ್ ಗೋಧಿಹಿಟ್ಟು, 1/4 ಕಪ್ ರಾಗಿ ಹಿಟ್ಟು, 2 ಚಮಚ ಕಡಲೆ ಹಿಟ್ಟು, 1 ಚಮಚ ಖಾರದ ಪುಡಿ, 1/2 ಚಮಚ ಎಳ್ಳು, 1/2 ಚಮಚ ಜೀರಿಗೆ, 1/2 ಹಸಿಮೆಣಸು, ಚಿಟಿಕಿ ಇಂಗು, 1 ಕಪ್ ಹೀರೆಕಾಯಿ ತುರಿ, ರುಚಿಗೆ ತಕ್ಕ ಉಪ್ಪು, 1/4 ಚಮಚ ಅರಸಿನ, 2-3 ಚಮಚ ಎಣ್ಣೆ, 2 ಚಮಚ ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ರಾಗಿ ಹಿಟ್ಟು, ಗೋಧಿ ಹಿಟ್ಟು, ಕಡಲೆ ಹಿಟ್ಟು, ಕಾರದ ಪುಡಿ, ಎಳ್ಳು, ಜೀರಿಗೆ, ಹಸಿಮೆಣಸು ಚೂರು, ಇಂಗು ಅರಸಿನ ಪುಡಿ, ಕೊತ್ತಂಬರಿ ಸೊಪ್ಪು, ಹೀರೆಕಾಯಿ ತುರಿ ಹಾಕಿ ಚೆನ್ನಾಗಿ ಕಲಸಿ. ಹೀರಿಕಾಯಿ ತುರಿಯಲ್ಲಿಯೇ ರೊಟ್ಟಿ ಮಿಶ್ರಣ ಕಲಸಿದರೆ ರೊಟ್ಟಿ ರುಚಿಯಾಗುತ್ತದೆ. ನಂತರ ಉಂಡೆ ಮಾಡಿ ಬಾಳೆಲೆಯಲ್ಲಿ ತಟ್ಟಿ ತವಾದಲ್ಲಿ ಎಣ್ಣೆ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ಚಟ್ನಿಯೊಂದಿಗೆ ಸವಿಯಿರಿ.




ಹೀರೆಸಿಪ್ಪೆ ಚಟ್ನಿಪುಡಿ


ಬೇಕಾಗುವ ವಸ್ತುಗಳು: ಒಂದು ಕಪ್ ಹದವಾಗಿ ಬಲಿತ ಹೀರೆಸಿಪ್ಪೆ, 1/2 ಕಪ್ ಕೊಬ್ಬರಿ, 2 ಚಮಚ ಬಿಳಿ ಎಳ್ಳು, 1/4 ಕಪ್ ಹುರಿಕಡಲೆ, 1/4 ಕಪ್ ಕರಿಬೇವು, 7-8 ಕೆಂಪು ಮೆಣಸು, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು, ನೀರಪಸೆ ತೆಗೆದು ಆರಿದ ಹೀರೆಕಾಯಿ ಸಿಪ್ಪೆ ಹಾಕಿ ಚೆನ್ನಾಗೆ ಹುರಿದು ಕೆಳಗಿಳಿಸಿ. ಕೊಬ್ಬರಿ ಸ್ವಲ್ಪ ಬಿಸಿ ಮಾಡಿ. ನಂತರ ಹುರಿದ ಎಳ್ಳು, ಕರಿಬೇವು, ಕೆಂಪು ಮೆಣಸು, ಹುರಿದ ಹೀರೆಕಾಯಿ ಸಿಪ್ಪೆ, ಕೊಬ್ಬರಿ, ಹುರಿಕಡಲೆ, 2 ಚಮಚ ಹುಳಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ತರಿತರಿಯಾಗಿ ಪುಡಿಮಾಡಿ. ಪೌಷ್ಠಿಕಾಂಶವುಳ್ಳ ಈ ಚಟ್ನಿಪುಡಿಯನ್ನು ದೋಸೆ, ಅನ್ನದೊಂದಿಗೆ ಸವಿಯಬಹುದು.