ಮಾಂಬಳ

ಮಾಂಬಳದಲ್ಲಿ ರುಚಿಕರ ಅಡುಗೆಗಳು

ಮಾವಿನ ಹಣ್ಣು ತುಂಬಾ ಆಗುವ ಕಾಲದಲ್ಲಿ, ಚೆನ್ನಾಗಿ ಬಲಿತ ಸಿಹಿ ಕಾಡು ಮಾವಿನಹಣ್ಣುಗಳನ್ನು ತೊಟ್ಟು ತೆಗೆದು, ತೊಳೆದು ರುಬ್ಬುವ ಕಲ್ಲಿನಲ್ಲಿ ಸಿಪ್ಪೆ ಮತ್ತು ಐಜೆಯನ್ನು ಹಾಕಿ ಮರದ ಕುಟ್ಟಾನಿಯಲ್ಲಿ ಕುಟ್ಟಿ ನಂತರ ಹಿಂಡಿ ರಸ ತೆಗೆದು, ಚಾಪೆ ಅಥವಾ ಮೊರದ ಮೇಲೆ ಬಿಳಿ ಬಟ್ಟೆ ಹಾಕಿ ಹಿಂಡಿದ ರಸ ಹಾಕಿ ಹರಡಿ ಬಿಸಿಲಿಗೆ ಎತ್ತರದ ಜಾಗದಲ್ಲಿಟ್ಟು 6 ದಿವಸ ಇಡಿ. 7ನೇ ದಿನ ಬೆಳಿಗ್ಗೆ ಬಟ್ಟೆಯಿಂದ ಮಾಂಬಳ ಮೆತ್ತಗೆ ತೆಗೆದು, ಮೊರಕ್ಕೆ ಬೇರೆ ಬಟ್ಟೆ ಹಾಕಿ ಕವುಚಿ ಹಾಕಿ. ಎರಡು ದಿನ ಮೇಲಿನ ಬದಿಗೆ ರಸ ಹಾಕಿ ಹತ್ತು ಬಿಸಿಲು ಒಣಗಿಸಿ. ನಂತರ ಮೂರುವರೆ ಇಂಚು ಚೌಕದ ತುಂಡು ಮಾಡಿ ಪೋಲಿಥಿನ್ ಕವರ್ ನಲ್ಲಿ ಹಾಕಿ ಡಬ್ಬದಲ್ಲಿ ಇಟ್ಟರೆ ಎರಡು ವರ್ಷಕ್ಕೂ ಕೆಡದು. ಸಣ್ಣ ಮಕ್ಕಳು ಚಾಕಲೇಟಿನಂತೆ ತಿನ್ನಲು ಇಷ್ಟಪಡುತ್ತಾರೆ.

ಮಾಂಬಳ ಸಾಸಿವೆ 


ಬೇಕಾಗುವ ವಸ್ತುಗಳು: 1/2 ಕಪ್ ಹೆಚ್ಚಿದ ಮಾಂಬಳ,  1 1/2 ಕಪ್ ತೆಂಗಿನ ತುರಿ, 1/4 ಕಪ್ ಬೆಲ್ಲ,  1 ಚಮಚ ಸಾಸಿವೆ, 1 ಒಣಮೆಣಸು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮಾಂಬಳವನ್ನು 1/2 ಕಪ್ ನೀರು ಹಾಕಿ ಬೆಲ್ಲ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಿವುಚಿ ಇಡಿ. ನಂತರ ತೆಂಗಿನ ತುರಿ, ಸಾಸಿವೆ, 1 ಒಣಮೆಣಸು ಸೇರಿಸಿ ನುಣ್ಣಗೆ ರುಬ್ಬಿ, ಕಿವುಚಿಟ್ಟ ಮಾಂಬಳಕ್ಕೆ ಬೆರೆಸಿ. ಈಗ ರುಚಿಯಾದ ಮಾಂಬಳ ಸಾಸಿವೆ ಅನ್ನದೊಂದಿಗೆ ಬೆರೆಸಿ ಉಣ್ಣಲು ಸಿದ್ಧ.










ಮಾಂಬಳ ಸಿಹಿ ತಂಬುಳಿ


ಬೇಕಾಗುವ ವಸ್ತುಗಳು: 1 ಕಪ್ ಮಾಂಬಳ,  2 ಒಣಮೆಣಸು,  1/2 ಕಪ್ ತೆಂಗಿನ ತುರಿ, 1/2 ಕಪ್ ಬೆಲ್ಲ,  2 ಕಪ್ ಮಜ್ಜಿಗೆ,  ರುಚಿಗೆ ತಕ್ಕಷ್ಟು ಉಪ್ಪು, 1/2 ಚಮಚ ತುಪ್ಪ, 1/2 ಚಮಚ ಸಾಸಿವೆ.
ಮಾಡುವ ವಿಧಾನ: ಮಾಂಬಳವನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ, ಒಣಮೆಣಸು ಹುರಿದು ಕಾಯಿತುರಿ ಸೇರಿಸಿ ರುಬ್ಬಿ ಮಾಂಬಳವನ್ನು ಬೆಲ್ಲವನ್ನು ಸೇರಿಸಿ ಪುನಹ ನುಣ್ಣಗೆ ರುಬ್ಬಿ. ಮಜ್ಜಿಗೆ ಮತ್ತು ಉಪ್ಪು ಸೇರಿಸಿ ಬೇಕಾದಷ್ಟು ತೆಳ್ಳಗೆ ಮಾಡಿ, ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಕೊಡಿ. ಈಗ ರುಚಿಯಾದ ಪೌಷ್ಠಿಕ ಸಿಹಿ ತಂಬುಳಿಯನ್ನು ಅನ್ನದೊಂದಿಗೆ ಸವಿಯಿರಿ.







ಮಾಂಬಳ ಗೊಜ್ಜು


ಬೇಕಾಗುವ ವಸ್ತುಗಳು: 1/2 ಕಪ್ ಹೆಚ್ಚಿದ ಮಾಂಬಳ, 1 ಕಪ್ ನೀರು, 1/4 ಕಪ್ ಬೆಲ್ಲ, 1 ಹಸಿಮೆಣಸು, 1 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1 ಒಣಮೆಣಸು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮಾಂಬಳವನ್ನು ಸಣ್ಣಗೆ ತುಂಡು ಮಾಡಿ ನೀರಿಗೆ ಹಾಕಿ. ನಂತರ ಬೆಲ್ಲ ಉಪ್ಪು ಹಾಕಿ, ಹಸಿಮೆಣಸು ಹೆಚ್ಚಿ ಹಾಕಿ 5-10 ನಿಮಿಷ ಕುದಿಸಿ. ನಂತರ ಇಳಿಸಿ ಎಣ್ಣೆಯಲ್ಲಿ ಸಾಸಿವೆ ಒಣಮೆಣಸಿನ ಒಗ್ಗರಣೆ ಕೊಡಿ. 

ಸಿಹಿ ಜೋಳ - Sweet Corn

Sweet Corn - ಸಿಹಿ ಜೋಳ


ಸಿಹಿ ಜೋಳದಲ್ಲಿ, ಮುಸುಕಿನ ಜೋಳದಲ್ಲಿರುವ ಎಲ್ಲಾ ಪೌಷ್ಠಿಕಾಂಶಗಳಿವೆ. ತಿನ್ನಲು ರುಚಿಯಾಗಿರುವ ಈ ಜೋಳದಿಂದ ಹಲವು ಬಗೆಯ ಪೌಷ್ಠಿಕ ಸ್ವಾದಿಷ್ಟ ಅಡುಗೆಗಳನ್ನು ಮಾಡಬಹುದು.

ಸಿಹಿ ಜೋಳದ ಪಾಯಸ


ಬೇಕಾಗುವ ವಸ್ತುಗಳು: 1 ಕಪ್ ಸಿಹಿ ಜೋಳ, 1/2 ಕಪ್ ಬೆಲ್ಲ ಯಾ ಸಕ್ಕರೆ, 2-3 ಏಲಕ್ಕಿ, ಒಂದು ಟೀ ಚಮಚ ಅಕ್ಕಿ ಹಿಟ್ಟು, 1 ಕಪ್ ತೆಂಗಿನ ತುರಿ, ಚಿಟಿಕಿ ಉಪ್ಪು

ಮಾಡುವ ವಿಧಾನ: ತೆಂಗಿನ ತುರಿ ತರಿತರಿಯಾಗಿ ರುಬ್ಬಿ, ದಪ್ಪ ಹಾಲು ತೆಗೆದು ಪ್ರತ್ಯೇಕ ಇಡಿ. ನಂತರ ಪುನಹ ಸ್ವಲ್ಪ ನೀರು ಸೇರಿಸಿ ರುಬ್ಬಿ, ನೀರು ಹಾಲು ತೆಗೆದಿರಿಸಿ. ಸಿಹಿ ಜೋಳ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ನೀರು ಹಾಲು, ಚಿಟಿಕಿ ಉಪ್ಪು ಹಾಕಿ ಕುದಿಸಿ. 5 ನಿಮಿಷ ಕುದಿದ ನಂತರ  ಬೆಲ್ಲ ಹಾಕಿ. ಬೆಲ್ಲ ಕರಗಿದಾಗ ಅಕ್ಕಿ ಹಿಟ್ಟು ನೀರಿನಲ್ಲಿ ಕರಗಿಸಿ ಹಾಕಿ. ಕುದಿಯಲು ಆರಂಭವಾದಾಗ ದಪ್ಪ ಹಾಲು ಮತ್ತು ಏಲಕ್ಕಿ ಪುಡಿ ಹಾಕಿ ಬೆರೆಸಿ, ಒಲೆಯಿಂದ ಕೆಳಗಿಳಿಸಿ. ಈಗ ರುಚಿಯಾದ ಪೌಷ್ಠಿಕ ಜೋಳದ ಪಾಯಸ ಸವಿಯಲು ಸಿದ್ಧ.






ಸಿಹಿ ಜೋಳದ ಉಪ್ಪಿಟ್ಟು


ಬೇಕಾಗುವ ವಸ್ತುಗಳು: 1ಕಪ್ ಉಪ್ಪಿಟ್ಟು ರವೆ, 1 ಕಪ್ ಸಿಹಿ ಜೋಳ, 2-3 ಹಸಿಮೆಣಸು, 1/4 ಕಪ್ ಕ್ಯಾರೆಟ್, 1/4 ಕಪ್ ತುಪ್ಪ, 1 ಟೀ ಚಮಚ ಸಾಸಿವೆ, 1 ಟೀ ಚಮಚ ಉದ್ದಿನ ಬೇಳೆ, 1 ಟೀ ಚಮಚ ಜೀರಿಗೆ, 2 ಕಪ್ ನೀರು, 1/4 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ, 1/2 ಕಪ್ ನಿಂಬೆಹಣ್ಣು, 1/2" ಉದ್ದದ ಶುಂಠಿ, 1 ಎಸಳು ಕರಿಬೇವಿನೆಲೆ, ರುಚಿಗೆ ಉಪ್ಪು, ಒಣಮೆಣಸು 1.

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು 2 ಚಮಚ ತುಪ್ಪ ಹಾಕಿ. ಬಿಸಿಯಾದಾಗ ರವೆ ಹಾಕಿ ಸ್ವಲ್ಪ ಪರಿಮಳ ಬರುವವರೆಗೆ ಹುರಿದು ಕೆಳಗಿಳಿಸಿ. ನಂತರ ಬಾಣಲೆಗೆ ಪುನಹ ತುಪ್ಪ ಹಾಕಿ ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ, ಉದ್ದಿನಬೇಳೆ, ಜೀರಿಗೆ, ಒಣಮೆಣಸು ಹಾಕಿ. ಇವು ಕಾದು ಸಿಡಿದಾಗ ಕರಿಬೇವು ಮತ್ತು ಈರುಳ್ಳಿ ಚೂರು ಹಾಕಿ, ನೀರು ಸೇರಿಸಿ. ಮಿಶ್ರಣ ಕುದಿಯಲು ಆರಂಭವಾದಾಗ ಹುರಿದ ರವೆ ಹಾಕಿ ತಿರುಗಿಸಿ. ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ. 5 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಮುಚ್ಚಿಡಿ. ಬೆಂದ ಮೇಲೆ ಒಲೆಯಿಂದ ಕೆಳಗಿಳಿಸಿ, ನಿಂಬೆರಸ ಬೆರೆಸಿ ಮಿಶ್ರ ಮಾಡಿ. ಈಗ ಘಮಘಮಿಸುವ ಸಿಹಿ ಜೋಳದ ಉಪ್ಪಿಟ್ಟು ಸಿದ್ಧ.





ಸಿಹಿ ಜೋಳದ ಹಲ್ವಾ



ಬೇಕಾಗುವ ವಸ್ತುಗಳು: 1 ಕಪ್ ಸಿಹಿ ಜೋಳ, 1/2 ಕಪ್ ಸಕ್ಕರೆ, 1/4 ಕಪ್ ತುಪ್ಪ, ಗೋಡಂಬಿ 7-8, ದ್ರಾಕ್ಷಿ 8-9, 1 ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ: ಸಿಹಿ ಜೋಳ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ರುಬ್ಬಿದ ಜೋಳದ ಮಿಶ್ರಣ ಹಾಕಿ, ಸಕ್ಕರೆ ಹಾಕಿ ತಿರುಗಿಸಿ. ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ತುಪ್ಪ ಸೇರಿಸಿ ತಿರುಗಿಸುತ್ತಿರಿ. ತುಪ್ಪವೆಲ್ಲಾ ಬೇರ್ಪಟ್ಟು ಹಲ್ವಾದಿಂದ ಹೊರಬರುವಾಗ ಏಲಕ್ಕಿ ಪುಡಿ ಹಾಕಿ. ನಂತರ ಬೇಕಾದ ಆಕೃತಿಗೆ ಗೆರೆ ಎಳೆದು ತುಂಡು ಮಾಡಿ, ಗೋಡಂಬಿ ದ್ರಾಕ್ಷಿಯಿಂದ ಅಲಂಕರಿಸಿ ಸವಿಯಲು ನೀಡಿ.