ಪುದೀನ - Mint

ಪುದೀನ   ಸೊಪ್ಪಿನ  ರುಚಿಕರ   ಅಡುಗೆಗಳು

 

ಅಜೀರ್ಣ  ವ್ಯಾಧಿಯಿಂದ   ನರಳುತ್ತಿರುವವರು  ಪ್ರತಿದಿನ  5-6   ಎಲೆಗಳನ್ನು  ಊಟಕ್ಕೆ   ಮೊದಲು  ಜಗಿದು  ತಿನ್ನುವುದರಿಂದ  ತಿಂದ   ಆಹಾರ   ಚೆನ್ನಾಗಿ   ಜೀರ್ಣವಾಗುವುದು .   ಪುದೀನ  ಸೊಪ್ಪಿನ  ಟೀ  ತಯಾರಿಸಿ   ದಿನಕ್ಕೆ  3 ಬಾರಿ 4 ಚಮಚದಷ್ಟು ಸೇವಿಸುವುದರಿಂದ   ಬಿಕ್ಕಳಿಕೆ  ನಿಲ್ಲುವುದು . ಪುದೀನ   ಸೊಪ್ಪಿನ  ಚಟ್ನಿಯನ್ನು  ಸೇವಿಸುವುದರಿಂದ  ಹಸಿವೆ   ಹೆಚ್ಚಾಗುತ್ತದೆ . ಪುದೀನ  ಸೊಪ್ಪಿನ  ಕಷಾಯ  ತಯಾರಿಸಿ  ದಿನಕ್ಕೆ   3 ಬಾರಿ  4  ಚಮಚದಷ್ಟು    ಸೇವಿಸುದರಿಂದ  ಕೆಮ್ಮು  ಹಾಗೂ  ನೆಗಡಿ  ಗುಣವಾಗುವುದು . ಹೀಗೆ   ಹಲವು   ಔಷಧೀಯ   ಗುಣಗಳಿರುವ  ಪುದೀನ   ಸೊಪ್ಪನ್ನು    ಅಡುಗೆಯಲ್ಲಿ   ಆಗಾಗ್ಗ ಉಪಯೋಗಿಸುತ್ತಿದ್ದರೆ    ನಮ್ಮ  ಆರೋಗ್ಯ   ಉತ್ತಮವಾಗುವುದು.


ಪುದೀನ ಉಪ್ಪಿಟ್ಟು

 

 

ಬೇಕಾಗುವ  ವಸ್ತುಗಳು:  1ಸಣ್ಣ ಕಟ್ಟು ಪುದೀನ,  1-2  ಹಸಿಮೆಣಸು,  1-2 ಲವಂಗ,  2  ಚಮಚ ಕೊತ್ತಂಬರಿಸೊಪ್ಪು, 1ಕಪ್  ಉಪ್ಪಿಟ್ಟು ರವೆ,   2ಚಮಚ ಎಣ್ಣೆ,     2ಚಮಚ ತುಪ್ಪ,  1ಚಮಚ ಸಾಸಿವೆ ,  1 ಚಮಚ ಕಡಲೆಬೇಳೆ, 1ಚಮಚ  ಉದ್ದಿನ ಬೇಳೆ, 2 ಚಮಚ  ನೆಲಕಡಲೆಬೀಜ,  ಚಿಟಿಕೆ ಇಂಗು , 1ಒಣಮೆಣಸು, 1 ಎಸಳು ಕರಿಬೇವು, 1/4 ಕಪ್  ಟೊಮೆಟೊ ಚೂರು,1/2 ಚಮಚ
ಬೆಲ್ಲ , ರುಚಿಗೆ ತಕ್ಕಷ್ಟು ಉಪ್ಪು, 1/4 ಕಪ್ ತೆಂಗಿನತುರಿ.
ಮಾಡುವ ವಿಧಾನ : ಬಾಣಲೆ  ಒಲೆಯ ಮೇಲಿಟ್ಟು  1ಚಮಚ ತುಪ್ಪ ಹಾಕಿ  ಬಿಸಿಯಾದಾಗ  ರವೆ  ಹಾಕಿ ಸ್ವಲ್ಪ ಪರಿಮಳ ಬರುವ ವರೆಗೆ  ಹುರಿದು  ಕೆಳಗಿಳಿಸಿ.  ನಂತರ  ಸ್ಚಚ್ಚವಾಗಿ   ತೊಳೆದ  ಪುದೀನ  ಹಸಿಮೆಣಸು, ಲವಂಗ, ಕೊತ್ತಂಬರಿಸೊಪ್ಪು  ಸ್ನಲ್ಪ ನೀರು ಸೇರಿಸಿ ರುಬ್ಬಿ. ನಂತರ ರವೆ  ಹುರಿದ ಬಾಣಲೆ  ಒಲೆಯ ಮೇಲಿಟ್ಟು ಎಣ್ಣೆ, ತುಪ್ಪ, ಹಾಕಿ ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ, ಕಡಲೆಬೇಳೆ,  ಉದ್ದಿನಬೇಳೆ , ನೆಲಕಡಲೆಬೀಜ,  ಇಂಗು, ಒಣಮೆಣಸು, ಕರಿಬೇವು ಹಾಕಿ ಬೇಳೆ ಕೆಂಪಾದಾಗ ಟೊಮೆಟೊಚೂರು, ರುಬ್ಬಿದ ಮಿಶ್ರಣ, ಬೆಲ್ಲ, ಉಪ್ಪು,ನೀರು ಹಾಕಿ ನೀರು ಕುದಿದಾಗ  ಹುರಿದ ರವೆ  ಹಾಕಿ ಸಣ್ಣ ಉರಿಯಲ್ಲಿ 8-10 ನಿಮಿಷ ರವೆ ಬೇಯಲಿ . ನಂತರ ಕೆಳಗಿಳಿಸಿ  ತೆಂಗಿನತುರಿ ಹಾಕಿ ತೊಳಸಿ ಈಗ ಸ್ವಾದಿಷ್ಟವಾದ ಪುದೀನ  ಉಪ್ಪಿಟ್ಟು  ಸವಿಯಲು   ಸಿದ್ಧ.





ಪುದೀನ ಮಸಾಲ ಲಸ್ಸೀ

 

 

ಬೇಕಾಗುವ  ವಸ್ತುಗಳು : 1 ಸಣ್ಣ ಕಟ್ಟು ಪುದೀನ,1/4" ಉದ್ದದ ಶುಂಠಿ, 1/4 ಚಮಚ ಜೀರಿಗೆ, 1/4 ಚಮಚ  ಕಾಳುಮೆಣಸು, 1 ಕಪ್  ಮೊಸರು, ರುಚಿಗೆ ತಕ್ಕಷ್ಟು ಉಪ್ಪು, 1ಹಸಿಮೆಣಸು.
ಮಾಡುವ ವಿಧಾನ: ತೊಳೆದು ಸ್ವಚ್ಚಗೊಳಿಸಿದ  ಪುದೀನ, ಶುಂಠಿ ಚೂರು, ಶುಂಠಿ, ಜೀರಿಗೆ, ಕಾಳುಮಮೆಣಸು, ಹಸಿಮೆಣಸು,ಮೊಸರು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ.  ನಂತರ ಶೋಧಿಸಿ, ಗ್ಲಾಸಿಗೆ ಹಾಕಿ  ಬೆಕಾದಷ್ಟು ನೀರು, ಉಪ್ಪು ಸೇರಿಸಿ ಚೆನ್ನಾಗಿ ಕಲಕಿ 1 ಗಂಟೆ ಹಾಗೆಯೇ ಇಟ್ಟು ಕುಡಿದರೆ  ಹೊಟ್ಟೆಗೆ ಹಿತವಾದ ಪುದೀನ ಮಸಾಲ ಲಸ್ಸೀ ಸವಿಯಲು ಸಿದ್ಧ.





ಪುದೀನ ಚಟ್ನಿ

 

 

ಬೇಕಾಗುವ ವಸ್ತುಗಳು: 1ಕಪ್ ತೊಳದು ಸ್ವಚ್ಚಗೊಳಿಸಿದ ಪುದೀನ, 2ಚಮಚ ಹುರಿಕಡಲೆ, 2-3 ಹಸಿಮೆಣಸು, 2 ಚಮಚ  ನಿಂಬೆರಸ, ಸಣ್ಣ ತುಂಡು ಶುಂಠಿ, ಉಪ್ಪು ರುಚಿಗೆ ತಕ್ಕಷ್ಟು , 1/4 ಕಪ್ ತೆಂಗಿನ ತುರಿ,  2ಚಮಚ ಎಣ್ಣೆ , 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು .
ಮಾಡುವ ವಿಧಾನ: ಬಾಣಲೆ ಒಲೆಯ  ಮೇಲಿಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಪುದೀನ, ಹಸಿಮೆಣಸು ಚೂರು ಹಾಕಿ ಸ್ವಲ್ಪ ಹುರಿದು ಕೆಳಗಿಳಿಸಿ. ನಂತರ ಶುಂಠಿ, ತೆಂಗಿನತುರಿ, ಹುರಿಕಡಲೆ, ಹುರಿದ ಪುದೀನ, ಹಸಿಮೆಣಸು ಮಿಶ್ರಣ, ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸು ಹಾಕಿ  ಒಗ್ಗರಣೆ ಕೊಡಿ. ಈಗ ಸ್ಷಾದಿಷ್ಟವಾದ ಪುದೀನ ಚಟ್ನಿ, ಅನ್ನ, ದೋಸೆ, ಇಡ್ಲಿಯೊಂದಿಗೆ  ಸವಿಯಲು ಸಿದ್ಧ.











ಪುದೀನ ಜ್ಯೂಸ್

 

 

ಬೇಕಾಗುವ ವಸ್ತುಗಳು: 1 ಸಣ್ಣ ಕಟ್ಟು ಪುದೀನ, ಸಣ್ಣ ತುಂಡು ಶುಂಠಿ, 1/4 ಕಪ್ ಸಕ್ಕರೆ ಯಾ 4 ಚಮಚ ಜೇನುತುಪ್ಪ, 2 ಚಮಚ ನಿಂಬೆರಸ, ಚಿಟಿಕೆ ಉಪ್ಪು, 1/4ಚಮಚ ಏಲಕ್ಕಿ ಪುಡಿ.
ಮಾಡುವ ವಿಧಾನ: ಸ್ಷಚ್ಚಗೊಳಿಸಿದ ಪುದೀನ, ಶುಂಠಿ, ಸ್ವಲ್ಪ ನೀರು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಅದನ್ನು ಸೋಸಿ ನಿಂಬೆರಸ ಸಕ್ಕರೆ ಯಾ ಜೇನುತುಪ್ಪ, ಏಲಕ್ಕಿಪುಡಿ, ಉಪ್ಪುಸೇರಿಸಿ ಚೆನ್ನಾಗಿ ಬೆರೆಸಿ ನಂತರ ಗ್ಲಾಸಿಗೆ ಹಾಕಿ ಕುಡಿಯಿರಿ ಇದು ಕುಡಿಯಲು ಚೆನ್ನಾಗಿದ್ದು, ಜೀರ್ಣಕಾರಿ ಕೂಡಾ.






ಯುಗಾದಿ ವಿಶೇಷ - Ugadi Special

ಯುಗಾದಿ ಹಬ್ಬದ ವಿಶೇಷ ಅಡುಗೆಗಳು

ಯುಗಾದಿ ಹಬ್ಬ ಮತ್ತೆ ಬಂದಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌರಮಾನ ಯುಗಾದಿ ಹಬ್ಬ ಆಚರಿಸುತ್ತೇವೆ. ಮನೆಯಲ್ಲಿಯೇ ಬೆಳೆದ ತರಕಾರಿ ಹಣ್ಣು ದೇವರ ಮೂರ್ತಿ ಮುಂದೆ ಇಟ್ಟು ನೈವೇದ್ಯ ಮಾಡಿ, ಹಿರಿಯರಿಗೆ ನಮಸ್ಕರಿಸಿ ನಂತರ ಹಬ್ಬದೂಟ ಮಾಡುತ್ತೇವೆ. ಕಡುಬು, ಪಾಯಸ, ಕಜ್ಜಾಯ ಮಾಡಿ ಸಂಭ್ರಮಿಸುತ್ತೇವೆ.

ಮೂಡೆ ಕೊಟ್ಟಿಗೆ


ಬೇಕಾಗುವ ವಸ್ತುಗಳು: 2 ಕಪ್ ಕುಚ್ಚಿಲಕ್ಕಿ, 1 ಕಪ್  ಬೆಳ್ತಿಗೆ ಅಕ್ಕಿ, 1 1/2 ಕಪ್ ಉದ್ದಿನಬೇಳೆ, ರುಚಿಗೆ ತಕ್ಕ ಉಪ್ಪು, 10-12 ಬಾಳೆಲೆ
ಮಾಡುವ ವಿಧಾನ: ಬೆಳ್ತಿಗೆ - ಕುಚ್ಚಿಲಕ್ಕಿ 6 ಗಂಟೆ ನೆನೆಸಿ. ಉದ್ದಿನಬೇಳೆ ಪ್ರತ್ಯೇಕವಾಗಿ ನೆನೆಸಿ. ನಂತರ ಉದ್ದಿನಬೇಳೆ ತೊಳೆದು ನುಣ್ಣಗೆ ರುಬ್ಬಿ. ಬೆಳ್ತಿಗೆ ಅಕ್ಕಿ ಕುಚ್ಚಿಲಕ್ಕಿ ತೊಳೆದು ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿ. ನಂತರ ಅಕ್ಕಿ ಹಿಟ್ಟು ಉದ್ದಿನ ಹಿಟ್ಟು ಬೆರೆಸಿ, ಉಪ್ಪು ಹಾಕಿ ಕಲಸಿ ಮುಚ್ಚಿಡಿ. ಹಿಟ್ಟು ಇಡ್ಲಿ ಹಿಟ್ಟಿನ ಹದಕ್ಕಿರಲಿ. ಮಾರನೆ ದಿನ ಬಾಡಿಸಿ ಸುರುಳಿಯಾಗಿ ಸುತ್ತಿದ ಬಾಳೆಲೆಯಲ್ಲಿ ಹಿಟ್ಟು ಎರೆದು, ಮೇಲಿನ ತುದಿಯನ್ನು ಬಾಳೆ ನಾರಿನಿಂದ ಬಿಗಿದು ಕಟ್ಟಿ, ಉಗಿಪಾತ್ರೆಯಲ್ಲಿಟ್ಟು 1 ಗಂಟೆ ಬೇಯಿಸಿ. ಬಾಳೆಲೆಯಲ್ಲಿ ಮಾಡುವುದರಿಂದ ಪರಿಮಳ ಮತ್ತು ಸ್ವಾದ ಚೆನ್ನಾಗಿರುತ್ತದೆ. ತೆಂಗಿನಕಾಯಿ ಚಟ್ನಿ, ಮೆಂತೆಕಾಳು ಸಾಂಬಾರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ಗರಿಗರಿ ಕಾಯಿವಡೆ


ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 1/2 ಕಪ್ ಕಾಯಿತುರಿ, 1 ಚಮಚ ಜೀರಿಗೆ, 1/4 ಚಮಚ ಅರಸಿನ ಪುಡಿ, 1 ಕೆಂಪುಮೆಣಸು, ರುಚಿಗೆ ತಕ್ಕ ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು 3-4 ಗಂಟೆ ನೆನೆಸಿ ನಂತರ ತೊಳೆದು, ತೆಂಗಿನತುರಿ, ಜೀರಿಗೆ, ಉಪ್ಪು, ಅರಸಿನಪುಡಿ, ಕೆಂಪುಮೆಣಸು ಸೇರಿಸಿ, ಗಟ್ಟಿಗೆ ನುಣ್ಣಗೆ ರುಬ್ಬಿ. ನಂತರ ಬೇಳೆಲೆಯ ಹಿಂಬದಿಗೆ ಎಣ್ಣೆ ಹಚ್ಚಿ ಪುಟ್ಟ ಪುಟ್ಟ ವಡೆ ತಟ್ಟಿ. ನಂತರ ಕಾದ ಎಣ್ಣೆಗೆ 10-12 ವಡೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆದು, ಸ್ವಲ್ಪ ಹೊತ್ತು ಬಿಳಿ ಹಾಳೆಯಮೇಲೆ ಹಾಕಿ ನಂತರ ಡಬ್ಬದಲ್ಲಿ ಹಾಕಿ. ಗರಿಗರಿಯಾಗಿರುವ ಈ ವಡೆ ರುಚಿಕರವಷ್ಟೇ ಅಲ್ಲ, 8 ದಿನಗಳವರೆಗೂ ಕೆಡದು.

ಅಕ್ಕಿ ಪಾಯಸ

ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 2 ಕಪ್ ತೆಂಗಿನಕಾಯಿ ಹಾಲು, 1 1/2 ಕಪ್ ಬೆಲ್ಲ, ಸ್ವಲ್ಪ ಏಲಕ್ಕಿ ಪುಡಿ, ಚಿಟಿಕಿ ಉಪ್ಪು

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಗೆ 4 ಕಪ್ ನೀರುಹಾಕಿ ಮೆತ್ತಗೆ ಬೇಯಿಸಿ. ನಂತರ ತೆಂಗಿನಕಾಯಿ ಹಾಲು ಸೇರಿಸಿ ಕುದಿಸಿ. ನಂತರ ಉಪ್ಪು, ಏಲಕ್ಕಿ ಪುಡಿ ಹಾಕಿ ಬೆರೆಸಿ. ದೇವರಿಗೆ ನೈವೇದ್ಯ ಮಾಡಿ ಸವಿಯಿರಿ. ಬೆಲ್ಲದ ಪಾಯಸ ಸಕ್ಕರೆ ಪಾಯಸಕ್ಕಿಂತಲೂ ರುಚಿ.


ಕಡಲೆ ಹಿಟ್ಟು ಮನೋಹರ



ಬೇಕಾಗುವ ವಸ್ತುಗಳು: 2 ಕಪ್ ಕಡಲೆ ಹಿಟ್ಟು, 1 ಕಪ್ ತುಪ್ಪ, 1 1/2 ಕಪ್ ಸಕ್ಕರೆ, 4 - 5 ಗೋಡಂಬಿ, 2 ಲವಂಗ, 3 - 4 ಏಲಕ್ಕಿ, 5 - 6 ದ್ರಾಕ್ಷಿ

ಮಾಡುವ ವಿಧಾನ: ಕಡಲೆಹಿಟ್ಟನ್ನು ನೀರಿನಲ್ಲಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ನಂತರ ಬಾಣಲೆಗೆ ತುಪ್ಪ ಹಾಕಿ ಕಾಯಿಸಿ. ನಂತರ ಲಾಡಿನ ಜರಡಿಯಲ್ಲಿ ಹಿಟ್ಟು ಹಾಕಿ ಕಾದ ತುಪ್ಪಕ್ಕೆ ಬಿಡಬೇಕು. ಬೇರೆ ಬೇರೆ ಕಾಳುಗಳಾಗುತ್ತವೆ. ಅದನ್ನು ತಿರುವಿ ಗರಿಗರಿಯಾದಾಗ ತೆಗೆದಿಡಿ. ನಂತರ ಬಾಣಲೆಯಲ್ಲಿ ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಪಾಕಕ್ಕೆ ಇಡಿ. ಪಾಕ ಕುದಿದು ನೂಲಿಗೆ ಬರಲಿ. ನಂತರ ಕೆಳಗಿಳಿಸಿ. ದ್ರಾಕ್ಷಿ, ಗೋಡಂಬಿ ಏಲಕ್ಕಿ, ಲವಂಗ ಹಾಕಿ. ಮಾಡಿಟ್ಟ ಕಾಳು ಹಾಕಿ ಚೆನ್ನಾಗಿ ತಿರುವಿ. ಈಗ ಕಡಲೆ ಹಿಟ್ಟಿನ ಮನೋಹರ ಸಿದ್ಧ.