ಪಡುವಲಕಾಯಿ - SNAKE GOURD

ಪಡುವಲಕಾಯಿಯ ರುಚಿಕರ ಅಡುಗೆಗಳು


ಪಡುವಲಕಾಯಿ ಉತ್ತಮ ಪೌಷ್ಟಿಕಾಂಶವುಳ್ಳ ತರಕಾರಿ. ಸಂಧಿವಾತ ಮಧುಮೇಹ, ಕ್ಷಯ - ಈ ರೋಗಗಳಿಂದ ನರಳುವವರಿಗೆ ಪಡುವಲಕಾಯಿ ಔಷಧಿಯುಕ್ತ ಆಹಾರ. ಪಡುವಲಕಾಯಿಯಿಂದ ಪಲ್ಯ, ಕೂಟು, ಮಜ್ಜಿಗೆಹುಳಿ ತಯಾರಿಸಬಹುದು. ಇದನ್ನು ಹೆಚ್ಚು ಹೆಚ್ಚು ಊಟ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುವುದು ಮತ್ತು ಉತ್ತಮ ಪೋಷಕಾಂಶಗಳು ದೇಹಗತವಾಗಿ ದೇಹಾರೋಗ್ಯ ಸುಧಾರಿಸುವುದು.

ಪಡುವಲಕಾಯಿ ಸಿಹಿ ಪಲ್ಯ





ಬೇಕಾಗುವ ವಸ್ತುಗಳು: 1 ಕಪ್ ಸಣ್ಣಗೆ ಹೆಚ್ಚಿದ ಪಡುವಲಕಾಯಿ, 1/2 ಚಮಚ ಕೆಂಪುಮೆಣಸಿನ ಪುಡಿ, 1/4 ಕಪ್ ತೆಂಗಿನ ತುರಿ, 1 ಚಮಚ ಬೆಲ್ಲ, 1/2 ಚಮಚ ಸಾಸಿವೆ, 1 ಚಮಚ ಉದ್ದಿನಬೇಳೆ, 1 ಕೆಂಪುಮೆಣಸು, ರುಚಿಗೆ ತಕ್ಕ ಉಪ್ಪು, 2 ಚಮಚ ಎಣ್ಣೆ

ಮಾಡುವ ವಿಧಾನ: ಪಡುವಲಕಾಯಿಯನ್ನು ಚೆನ್ನಾಗಿ ತೊಳೆದು, ತಿರುಳು ತೆಗೆದು ಸಣ್ಣಗೆ ಹೆಚ್ಚಿಡಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ, ಬಿಸಿಯಾದಾಗ ಸಾಸಿವೆ ಹಾಕಿ, ಸಿಡಿದಾಗ ಉದ್ದಿನಬೇಳೆ, ಕೆಂಪುಮೆಣಸು ಹಾಕಿ. ನಂತರ ಸಣ್ಣಗೆ ಹೆಚ್ಚಿದ ಪಡುವಲಕಾಯಿ ಹಾಕಿ ಸ್ವಲ್ಪ ಹುರಿದು ನಂತರ ಸ್ವಲ್ಪ ನೀರು, ಬೆಲ್ಲ, ಕೆಂಪುಮೆಣಸುಪುಡಿ, ಉಪ್ಪು ಹಾಕಿ ಮುಚ್ಚಿಡಿ. ಬೆಂದು ನೀರು ಆರುತ್ತಾ ಬಂದಾಗ ತೆಂಗಿನ ತುರಿ ಸೇರಿಸಿ ತೊಳಸಿ. ಒಲೆಯಿಂದ ಕೆಳಗಿಳಿಸಿ. ಈ ಪಲ್ಯ ಅನ್ನ, ಗಂಜಿಯೊಂದಿಗೆ ತಿನ್ನಲು ರುಚಿ. ತೆಂಗಿನ ತುರಿ ನುಣ್ಣಗೆ ರುಬ್ಬಿ ಪಲ್ಯಕ್ಕೆ ಹಾಕಿ ತೊಳಸಿದರೆ ಇನ್ನೊಂದು ಬಗೆಯ ಪಲ್ಯ ಸಿದ್ಧ.









ಪಡುವಲ ಜೀರಿಗೆ ಬೆಂದಿ


ಬೇಕಾಗುವ ವಸ್ತುಗಳು: 1 ಕಪ್ ತೊಳೆದು, ತಿರುಳು ತೆಗೆದು ಸಣ್ಣಗೆ ಹೆಚ್ಚಿದ ಪಡುವಲಕಾಯಿ, 2 ಕಪ್ ಹಸಿ ತೆಂಗಿನತುರಿ, 1 ಚಮಚ ಬೆಲ್ಲ, 1/2 ಚಮಚ ಜೀರಿಗೆ, 1/4 ಚಮಚ ಕೆಂಪುಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಪಡುವಲಕಾಯಿ ತುಂಡು, ಉಪ್ಪು, ಬೆಲ್ಲ, ಕೆಂಪುಮೆಣಸಿನಪುಡಿ, ಸ್ವಲ್ಪ ನೀರು ಹಾಕಿ ಬೇಯಿಸಿ. ತೆಂಗಿನತುರಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ. ಬೆಂದ ಪಡುವಲಕಾಯಿಗೆ ರುಬ್ಬಿದ ಮಿಶ್ರಣ, ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಟ್ಟು ಕುದಿಯಲು ಆರಂಭವಾಗುವಾಗಲೇ ಕೆಳಗಿಳಿಸಿ ಸೌಟಿನಿಂದ ತೊಳಸಿ. ಈ ಬೆಂದಿ ಸಾಂಬಾರಿಗಿಂತ ದಪ್ಪವಿರಬೇಕು. ಇದಕ್ಕೆ ಒಗ್ಗರಣೆ ಅಗತ್ಯವಿಲ್ಲ. ಕರಿಬೇವು ಕೂಡಾ ಹಾಕುವುದು ಬೇಡ. ಅನ್ನಕ್ಕೆ ಕಲಸಿ ತಿನ್ನಲು ಈ ಬೆಂದಿ ತುಂಬಾ ರುಚಿ.






ಪಡುವಲಕಾಯಿಯ ರೊಟ್ಟಿ


ಬೇಕಾಗುವ ವಸ್ತುಗಳು:  1 ಕಪ್ ಸಣ್ಣಗೆ ಹೆಚ್ಚಿದ ಪಡುವಲಕಾಯಿ, 3/4 ಕಪ್ ಅಕ್ಕಿಹಿಟ್ಟು, 1/4 ಕಪ್ ಗೋಧಿ ಹಿಟ್ಟು, 2 ಚಮಚ ತೆಂಗಿನತುರಿ, 1/2 ಚಮಚ ಜೀರಿಗೆ, 2 ಚಮಚ ಕೊತ್ತಂಬರಿಸೊಪ್ಪು, 1/2 ಚಮಚ ಕೆಂಪುಮೆಣಸು, 1/4 ಚಮಚ ಅರಸಿನಪುಡಿ, 3-4 ಚಮಚ ಎಣ್ಣೆ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:  ಪಡುವಲಕಾಯಿ ತುಂಡುಗಳನ್ನು ಉಗಿಯಲ್ಲಿ ಬೇಯಿಸಿ, ನಂತರ ತೆಂಗಿನತುರಿ ಜೀರಿಗೆ, ಕೊತ್ತಂಬರಿಸೊಪ್ಪು, ಅರಸಿನಪುಡಿ, ಕೆಂಪುಮೆಣಸುಪುಡಿ ಸೇರಿಸಿ, ನುಣ್ಣಗೆ ರುಬ್ಬಿ. ಈ ಮೆಶ್ರಣವನ್ನು ಅಕ್ಕಿಹಿಟ್ಟಿಗೆ ಸೇರಿಸಿ, ಉಪ್ಪು, ಬೇಕಾದರೆ ಸ್ವಲ್ಪ ನೀರು ಹಾಕಿ ಗಟ್ಟಿಗೆ ರೊಟ್ಟಿಹಿಟ್ಟಿನ ಹದಕ್ಕೆ ಕಲಸಿ. ನಂತರ ಉಂಡೆ ಮಾಡಿ, ಬಾಳೆಲೆಯಲ್ಲಿ ತೆಳುವಾಗಿ ತಟ್ಟಿ, ಕಾದ ಕಾವಲಿ ಮೇಲೆ ಕವುಚಿ ಹಾಕಿ. ಬಾಳೆಲೆ ಬಾಡಿದಾಗ ತೆಗೆದು, ಎಣ್ಣೆ ಹಾಕಿ ಮಗುಚಿ ಬೇಯಿಸಿ. ಘಮಘಮಿಸುವ ರೊಟ್ಟಿಯನ್ನು ಬಿಸಿಯಿರುವಾಗಲೇ ತಿನ್ನಲು ರುಚಿಯಾಗಿರುತ್ತದೆ.







ಪಡುವಲಕಾಯಿ ಚಟ್ನಿ


ಬೇಕಾಗುವ ವಸ್ತುಗಳು:  1 ಕಪ್ ಸಣ್ಣಗೆ ಹೆಚ್ಚಿದ ಪಡುವಲಕಾಯಿ, 1/2 ಕಪ್ ತೆಂಗಿನತುರಿ, 2-3 ಹಸಿಮೆಣಸು, 1/2 ಚಮಚ ಉದ್ದಿನಬೇಳೆ, 1/4 ಚಮಚ ಕಡಲೆಬೇಳೆ, 1/4 ಚಮಚ ಕೊತ್ತಂಬರಿ, ಚಿಟಿಕಿ ಇಂಗು, 1/4 ಚಮಚ ಹುಳಿರಸ, 1 ಎಸಳು ಕರಿಬೇವಿನೆಲೆ, 1 ಚಮಚ ಎಣ್ಣೆ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:  ಪಡುವಲಕಾಯಿ ಹೋಳು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಬೇಯಿಸಿ. ಉದ್ದಿನಬೇಳೆ, ಕಡಲೆಬೇಳೆ, ಇಂಗು, ಕೊತ್ತಂಬರಿ, ಕರಿಬೇವಿನೆಲೆ ಸ್ವಲ್ಪ, ಎಣ್ಣೆ ಹಾಕಿ ಹುರಿದು, ಬೇಯಿಸಿದ ಪಡುವಲಕಾಯಿ, ಹಸಿಮೆಣಸು, ಹುಳಿರಸ ಸೇರಿಸಿ ಚಟ್ನಿ ಹದಕ್ಕೆ ರುಬ್ಬಿ. ನಂತರ ಸಾಸಿವೆ, ಕರಿಬೇವು, ಸಣ್ಣತುಂಡು ಕೆಂಪುಮೆಣಸು ಹಾಕಿ ಎಣ್ಣೆಯಲ್ಲಿ ಒಗ್ಗರಣೆ ಕೊಡಿ. ಈ ಚಟ್ನಿಯು ರೊಟ್ಟಿ, ದೋಸೆಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ದೀಪಾವಳಿ ವಿಶೇಷ - DEEPAVALI SPECIAL

ದೀಪಾವಳಿ ಹಬ್ಬದ ವಿಶೇಷ ಖಾದ್ಯಗಳು

ಮತ್ತೆ ದೀಪಾವಳಿ ಬಂದಿದೆ. ಹೊಸ ಬಟ್ಟೆ ಧರಿಸಿ, ಪಟಾಕಿ ಸುಡುಮದ್ದು ಸಿಡಿಸಿ, ಸಿಹಿ ಖಾದ್ಯ ತಿನ್ನುವ ಸಂಭ್ರಮ. ಆದರೆ, ಈ ಬಾರಿ ವಾಯುಮಾಲಿನ್ಯ, ಶಬ್ದಮಾಲಿನ್ಯಗಳನ್ನುಂಟುಮಾಡುವ ಪಟಾಕಿ ಸುಡುಮದ್ದುಗಳನ್ನು ಸಿಡಿಸದೆ, ದೀಪ ಬೆಳಗಿಸಿ ಸರಳವಾಗಿ ಮನೋಹ್ಲಾದವುಂಟುಮಾಡುವ ದೀಪಾವಳಿ ಆಚರಿಸೋಣ. ವಾತಾವರಣ ಕಲುಷಿತಗೊಳಿಸದೆ ಹಬ್ಬ ಆಚರಿಸೋಣ.

ಅಕ್ಕಿ ಮುಳ್ಳುಸೌತೆ ಖಾರದ ಕಡ್ಡಿ





ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 2 ಹಸಿಮೆಣಸು, 1 ಚಮಚ ಜೀರಿಗೆ, 1/2 ಚಮಚ ಎಳ್ಳು, ಸಣ್ಣ ಗಾತ್ರದ ಒಂದು ಮುಳ್ಳುಸೌತೆ, ರುಚಿಗೆ ತಕ್ಕ ಉಪ್ಪು, 2-3 ಚಮಚ ಅಕ್ಕಿಹಿಟ್ಟು, ಕರಿಯಲು ಬೇಕಾದಷ್ಟು ಎಣ್ಣೆ, 1-2 ಚಮಚ ಬೆಣ್ಣೆ

ಮಾಡುವ ವಿಧಾನ: 2-3 ಗಂಟೆ ನೆನೆಸಿದ ಅಕ್ಕಿ ಚೆನ್ನಾಗಿ ತೊಳೆದು, ಸಿಪ್ಪೆ ತಿರುಳು ತೆಗೆದು, ಸಣ್ಣಗೆ ತುಂಡು ಮಾಡಿದ ಮುಳ್ಳುಸೌತೆ, ಹಸಿಮೆಣಸು, ಜೀರಿಗೆ, ಎಳ್ಳು ಸೇರಿಸಿ ನಯವಾಗಿ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ರುಬ್ಬಿದ ಹಿಟ್ಟು ಹಾಕಿ, ಹದ ಉರಿಯಲ್ಲಿ ತಿರುಗಿಸುತ್ತಾ ಇರಿ. ಉಪ್ಪು ಹಾಕಿ ಮಿಶ್ರಣ ಗಟ್ಟಿಯಾದ ನಂತರ ಕೆಳಗಿಳಿಸಿ. ಅಕ್ಕಿ ಹಿಟ್ಟು, ಎಣ್ಣೆ ಹಾಕಿ ಚೆನ್ನಾಗಿ ನಾದಿ. ಚಕ್ಕುಲಿ ಮುಟ್ಟಿನ ಖಾರದಕಡ್ಡಿ ಅಚ್ಚಿಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿಗರಿಯಾದ ಖಾರದ ಕಡ್ಡಿ ಸವಿಯಲು ಸಿದ್ಧ.








ಬೂದುಕುಂಬಳ ಬೋಂಡಾ


ಬೇಕಾಗುವ ವಸ್ತುಗಳು: 1 ಕಪ್ ಉದ್ದಿನಬೇಳೆ, 1/2 ಕಪ್ ಸಣ್ಣಗೆ ಹೆಚ್ಚಿದ ಬೂದುಕುಂಬಳ, 1-2 ಹಸಿಮೆಣಸು, 2 ಚಮಚ ಕೊತ್ತಂಬರಿಸೊಪ್ಪು, 2 ಚಮಚ ಕರಿಬೇವು, 1 ಚಮಚ ಜೀರಿಗೆ, ಚಿಟಿಕಿ ಇಂಗು, ರುಚಿಗೆ ತಕ್ಕ ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ

ಮಾಡುವ ವಿಧಾನ: ಉದ್ದಿನಬೇಳೆಯನ್ನು 2-3 ಗಂಟೆ ನೆನೆಸಿ. ನಂತರ ತೊಳೆದು ನಯವಾಗಿ ರುಬ್ಬಿ, ನಂತರ ಸಿಪ್ಪೆ, ತಿರುಳು ತೆಗೆದು ಸಣ್ಣಗೆ ಹೆಚ್ಚಿದ ಬೂದುಕುಂಬಳ ತುಂಡು, ಸಣ್ಣಗೆ ಹೆಚ್ಚಿದ ಹಸಿಮೆಣಸು, ಕೊತ್ತಂಬರಿಸೊಪ್ಪು, ಕರಿಬೇವು, ಉಪ್ಪು, ಇಂಗು, ಜೀರಿಗೆ ಹಾಕಿ, ರುಬ್ಬಿದ ಉದ್ದಿನಹಿಟ್ಟು ಬೆರೆಸಿ ಸರಿಯಾಗಿ ಕಲಸಿ. ನಂತರ ಕೈಯಿಂದ ಸ್ವಲ್ಪ ಸ್ವಲ್ಪವೇ ತೆಗೆದು ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಬೋಂಡಾ ಸವಿದು ನೋಡಿ.








ಸೋರೆಕಾಯಿ ಕಾಶಿ ಹಲ್ವ


ಬೇಕಾಗುವ ವಸ್ತುಗಳು: 2 ಕಪ್ ಸೋರೆಕಾಯಿ ತುರಿ, 1 ಕಪ್ ಸಕ್ಕರೆ, 1/4 ಕಪ್ ತುಪ್ಪ, 1/4 ಚಮಚ ಏಲಕ್ಕಿ ಪುಡಿ, 7-8 ಗೋಡಂಬಿ, 6-7 ಒಣದ್ರಾಕ್ಷೆ

ಮಾಡುವ ವಿಧಾನ: ಸೋರೆಕಾಯಿಯ ತಿರುಳು ತೆಗೆದು, ದೊಡ್ಡ ಹೋಳುಗಳಾಗಿ ಹೆಚ್ಚಿ ತುರಿಮಣೆಯಲ್ಲಿ ತುರಿದು ಇಡಿ. ಬಾಣಲೆ ಒಲೆಯಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ತುರಿದ ಸೋರೆಕಾಯಿ ಹಾಕಿ ತೊಳಸಿ. ಸೋರೆಕಾಯಿ ತುರಿ ಬೆಂದ ಮೇಲೆ ಸಕ್ಕರೆ ಹಾಕಿ. ಸಕ್ಕರೆ ಕರಗಿ ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿ ತೊಳಸಿ. ಮಿಶ್ರಣ ತಳ ಬಿಡುತ್ತಾ ಬಂದಾಗ ಏಲಕ್ಕಿ ಪುಡಿ ಹಾಕಿ ತೊಳಸಿ ಕೆಳಗಿಳಿಸಿ. ಬೌಲ್ ಗೆ ಹಾಕಿ ಸವಿಯಿರಿ.










ಆಲೂ ಬರ್ಫಿ


ಬೇಕಾಗುವ ವಸ್ತುಗಳು: ಬೇಯಿಸಿ ಸಿಪ್ಪೆ ತೆಗೆದು ಮಸೆದ ಆಲೂಗಡ್ಡೆ ಒಂದು ಕಪ್, 1/2 ಕಪ್ ತೆಂಗಿನ ತುರಿ, 1 ಕಪ್ ಸಕ್ಕರೆ, 1/2 ಚಮಚ ಏಲಕ್ಕಿ ಪುಡಿ, 2 ಚಮಚ ತುಪ್ಪ, 1 ಕಪ್ ಹಾಲು

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು, ತೆಂಗಿನ ತುರಿ ಹಾಕಿ ಸ್ವಲ್ಪ ಕೆಂಪಗಾಗುವವರೆಗೆ ಹುರಿದು ಕೆಳಗಿಳಿಸಿ. ನಂತರ ಅದೇ ಬಾಣಲೆಗೆ, ಹಾಲು ಸಕ್ಕರೆ ಹಾಕಿ. ಸಕ್ಕರೆ ಕರಗಿ ನೂಲುಪಾಕವಾದಾಗ, ಹುರಿದಿಟ್ಟ ತೆಂಗಿನತುರಿ ಹಾಕಿ, ಮಸೆದ ಆಲೂ ಹಾಕಿ ಸರಿಯಾಗಿ ತೊಳಸಿ. ಬಾಣಲೆಯಿಂದ ಮಿಶ್ರಣವೆಲ್ಲಾ ಬೆರೆತು ತಳಬಿಡುತ್ತಾ ಬಂದಾಗ ಏಲಕ್ಕಿ ಪುಡಿ ಸೇರಿಸಿ ತೊಳಸಿ. ನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ. ತಣಿದ ನಂತರ ತುಂಡು ಮಾಡಿ.



ಕಾನಕಲ್ಲಟೆ - Cayratia mollissima

ಕಾನಕಲ್ಲಟೆ ಕಾಯಿಯ ರುಚಿಕರ ಅಡುಗೆಗಳು


ಕಾನಕಲ್ಲಟೆ ಕಾಯಿ ನಮ್ಮೂರಿನ ವಿಶಿಷ್ಟ ತರಕಾರಿ. ಮೊದಲು ಕಾಡಿನಲ್ಲಿ ಬೆಳೆಯುತ್ತಿದ್ದ ಈ ತರಕಾರಿಯನ್ನು ಮನೆಯ ಹಿತ್ತಲಲ್ಲಿಯೂ ಬೆಳೆಸುತ್ತಾರೆ. ನೀರಿನ ಅನುಕೂಲವಿದ್ದರೆ ವರ್ಷವಿಡೀ ಈ ತರಕಾರಿ ಬೆಳೆಯುತ್ತದೆ. ಗೊಂಚಲು ಗೊಂಚಲಾಗಿ ಬಳ್ಳಿಯಲ್ಲಿ ಬೆಳೆಯುವ ಈ ತರಕಾರಿಯಲ್ಲಿ ಔಷಧೀಯ ಗುಣಗಳಿವೆ. ಈಗಿನ ಯುವಪೀಳಿಗೆಯ ಜನರಿಗೆ ಈ ತರಕಾರಿಯ ಪರಿಚಯವಿರದು. ಮಕ್ಕಳ ಅಜೀರ್ಣ, ಅತಿಸಾರ, ಬೆಳವಣಿಗೆ ಕೊರತೆ, ಕಫದೋಷಗಳಲ್ಲಿ ಒಳ್ಳೆಯದು. ಆಗಾಗ ಬರುವ ಜ್ವರಕ್ಕೂ ಹಿತ. ಈ ಕಾಯಿಯಿಂದ ಸಾಸಿವೆ, ಸಾಂಬಾರು, ಮೆಣಸುಕಾಯಿ ಮಾಡಬಹುದು. ಅದರಲ್ಲೂ ಸೌತೆ ಸೇರಿಸಿ ಮಾಡುವ ಮಜ್ಜಿಗೆ ಹುಳಿಯ ರುಚಿಯಂತೂ ಬಹಳ ಸ್ವಾದಿಷ್ಟವಾಗಿರುತ್ತದೆ.









ಕಾನಕಲ್ಲಟೆ ಕಾಯಿಯ ಮೆಣಸುಕಾಯಿ 




ಬೇಕಾಗುವ ವಸ್ತುಗಳು: 15-20 ಕಾನಕಲ್ಲಟೆ ಕಾಯಿ, ಒಂದುವರೆ ಕಪ್ ತೆಂಗಿನ ತುರಿ, ಸಣ್ಣ ತುಂಡು ಬೆಲ್ಲ, ಸಣ್ಣ ತುಂಡು ಹುಳಿ, 1 ಚಮಚ ಎಳ್ಳು, 1 ಹಸಿಮೆಣಸು, 2 ಒಣಮೆಣಸು, 1/2 ಚಮಚ ಸಾಸಿವೆ, 1 ಚಮಚ ಎಣ್ಣೆ, 1 ಎಸಳು ಕರಿಬೇವಿನೆಲೆ, ರುಚಿಗೆ ತಕ್ಕ ಉಪ್ಪು.

ಮಾಡುವ ವಿಧಾನ: ಕಾನಕಲ್ಲಟೆ ಕಾಯಿಯನ್ನು ಅಡ್ಡಕ್ಕೆ ಕತ್ತರಿಸಿ, ಒಲೆಯ ಮೇಲೆ ಒಂದು ಪಾತ್ರೆಯಿಟ್ಟು ಸ್ವಲ್ಪ ನೀರು ಹಾಕಿ ತುಂಡು ಮಾಡಿದ ಕಾನಕಲ್ಲಟೆ ಕಾಯಿ ಹಾಕಿ 1 ಕುದಿ ಕುದಿಸಿ ಇಳಿಸಿ. ನಂತರ ಕಾಯಿಯನ್ನು ಕೈಯಲ್ಲಿ ಹಿಸುಕಿ ಒಂದೇ ಒಂದು ಬೀಜ ಉಳಿಯದಂತೆ ಸಂಪೂರ್ಣವಾಗಿ ಬೀಜ ತೆಗೆಯಿರಿ. ಬೀಜ ಉಳಿದರೆ ಬಾಯಿ ಗಂಟಲು ತುರಿಸುತ್ತದೆ. ನಂತರ ಉಪ್ಪು, ಬೆಲ್ಲ, ಹುಳಿ, ಹಸಿಮೆಣಸು, ತುಂಡು ಮಾಡಿದ ಕಾನಕಲ್ಲಟೆ ಕಾಯಿ, ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಎಳ್ಳನ್ನು ಎಣ್ಣೆ ಹಾಕದೆ ಹುರಿದು, ಒಣಮೆಣಸು, ಎಣ್ಣೆ ಹಾಕಿ ಹುರಿದು, ತೆಂಗಿನತುರಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೇಯಿಸಿದ ಕಾನಕಲ್ಲಟೆ ಹೋಳುಗಳಿಗೆ ರುಬ್ಬಿದ ಮಿಶ್ರಣ, ಸಾಕಷ್ಟು ನೀರು ಸೇರಿಸಿ 1 ಕುದಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ ಕರಿಬೇವಿನೆಲೆ ಒಗ್ಗರಣೆ ಕೊಡಿ. ಈ ಪದಾರ್ಥ ತುಂಬ ನೀರಾಗಿ  ಇರದೆ ಸ್ವಲ್ಪ ದಪ್ಪವಿರಬೇಕು. ಅನ್ನ ದೋಸೆ ಜೊತೆ ತಿನ್ನಲು ರುಚಿ.




ಕಾನಕಲ್ಲಟೆ ಮಜ್ಜಿಗೆಹುಳಿ (ಮೇಲೋಗರ)




ಬೇಕಾಗುವ ವಸ್ತುಗಳು: 1/2 ಕಪ್ ಸಣ್ಣಗೆ ತುಂಡುಮಾಡಿದ ಮಂಗಳೂರು ಸೌತೆ, 15-20 ಕಾನಕಲ್ಲಟೆಕಾಯಿ, 2 ಕಪ್ ಹಸಿ ತೆಂಗಿನಕಾಯಿಯ ತುರಿ, 1/2 ಚಮಚ ಕೆಂಪುಮೆಣಸಿನ ಪುಡಿ, 1 ಹಸಿಮೆಣಸು, 1 ಚಿಟಿಕಿ ಅರಸಿನಪುಡಿ, 1 ಕಪ್ ದಪ್ಪ ಸಿಹಿ ಮಜ್ಜಿಗೆ, 1/2 ಕಪ್ ದಪ್ಪ ಹುಳಿಮಜ್ಜಿಗೆ, 1/2 ಚಮಚ ಸಾಸಿವೆ, ರುಚಿಗೆ ತಕ್ಕ ಉಪ್ಪು, 1 ಚಮಚ ತೆಂಗಿನೆಣ್ಣೆ, ಸಣ್ಣ ತುಂಡು ಕೆಂಪುಮೆಣಸು, 1 ಎಸಳು ಕರಿಬೇವಿನೆಲೆ

ಮಾಡುವ ವಿಧಾನ: ಕಾನಕಲ್ಲಟೆ ಕಾಯಿಯನ್ನು ಅಡ್ಡಕೆ ತುಂಡುಮಾಡಿ ಎರಡು ಹೋಳು ಮಾಡಿ. ನಂತರ ಒಲೆಯ ಮೇಲೆ ಒಂದು ಪಾತ್ರೆಯಿಟ್ಟು ಸ್ವಲ್ಪ ನೀರು ಹಾಕಿ ಹದ ಉರಿಯಲ್ಲಿ ತುಂಡು ಮಾಡಿದ ಕಾನಕಲ್ಲಟೆ ಕಾಯಿ ಹಾಕಿ 1 ಕುದಿ ಕುದಿಸಿ ಇಳಿಸಿ, ಕೈಯಲ್ಲಿ ಹಿಸುಕಿ ಬೀಜ ತೆಗೆದು, ತುಂಡುಮಾಡಿದ ಸೌತೆ, ಅರಸಿನ ಪುಡಿ, ಉಪ್ಪು, ಕೆಂಪುಮೆಣಸಿನ ಪುಡಿ, ಸೀಳಿದ ಹಸಿಮೆಣಸು ಸೇರಿಸಿ ಪಾತ್ರೆಗೆ ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ. ತೆಂಗಿನತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಬೇಯಿಸಿದ ಕಾನಕಲ್ಲಟೆ ಸೌತೆ ಮಿಶ್ರಣಕ್ಕೆ ಸೇರಿಸಿ. ನಂತರ ಸಿಹಿ ಮಜ್ಜಿಗೆ, ಹುಳಿ ಮಜ್ಜಿಗೆ, ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಟ್ಟು ಒಂದು ಕುದಿ ಕುದಿಸಿ. ನಂತರ ತೆಂಗಿನೆಣ್ಣೆಯಲ್ಲಿ ಸಾಸಿವೆ ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಈ ಮೇಲೋಗರ ಸಾಂಬಾರಿಗಿಂತ ದಪ್ಪವಿರಬೇಕು. ಈ ಮೇಲೋಗರ ಸ್ವಾದಿಷ್ಟವಾಗಿದ್ದು, ಉಣ್ಣಲು ಬಹಳ ರುಚಿಯಾಗಿರುತ್ತದೆ.

ಕಾನಕಲ್ಲಟೆ ಕಾಯಿ ಸಾಸಿವೆ




ಬೇಕಾಗುವ ವಸ್ತುಗಳು: 15-20 ಕಾನಕಲ್ಲಟೆ ಕಾಯಿ, 1 1/2 ಕಪ್ ತೆಂಗಿನ ತುರಿ, 1/2 ಚಮಚ ಕೆಂಪುಮೆಣಸಿನ ಪುಡಿ, 1 ಒಣಮೆಣಸು, 1/2 ಚಮಚ ಸಾಸಿವೆ, 1/2 ಚಮಚ ಬೆಲ್ಲ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಿಹಿ ಮಜ್ಜಿಗೆ

ಮಾಡುವ ವಿಧಾನ: ಕಾನಕಲ್ಲಟೆ ಕಾಯಿಯನ್ನು ಅಡ್ಡಕ್ಕೆ ತುಂಡು ಮಾಡಿ. ನಂತರ ಒಲೆಯ ಮೇಲೆ ಹದ ಉರಿಯಲ್ಲಿ ಒಂದು ಪಾತ್ರೆಯಿಟ್ಟು ಸ್ವಲ್ಪ ನೀರು ಹಾಕಿ  ತುಂಡು ಮಾಡಿದ ಕಾನಕಲ್ಲಟೆ ಕಾಯಿ ಹಾಕಿ 1 ಕುದಿ ಕುದಿಸಿ ಇಳಿಸಿ, ಕೈಯಲ್ಲಿ ಹಿಸುಕಿ ಬೀಜ ತೆಗೆದು, ಉಪ್ಪು, ಮೆಣಸಿನಪುಡಿ, ಬೆಲ್ಲ ಮತ್ತು ಸ್ವಲ್ಪ ನೀರು ಸೇರಿಸಿ ಬೇಯಿಸಿ. ಆರಿದ ನಂತರ ಮಜ್ಜಿಗೆ ಹಾಕಿ. ತೆಂಗಿನ ತುರಿಗೆ 1 ಒಣಮೆಣಸು, ಸಾಸಿವೆ ಸೇರಿಸಿ ನುಣ್ಣಗೆ ರುಬ್ಬಿ. ಬೇಯಿಸಿದ ತರಕಾರಿಗೆ ಹಾಕಿ ಸರಿಯಾಗಿ ತೊಳಸಿ, ಬೌಲ್ ಗೆ ಹಾಕಿ. ಒಣಮೆಣಸು ಕರಿಬೇವಿನಿಂದ ಅಲಂಕರಿಸಿ. ಇದನ್ನು ಕುದಿಸುವ ಕ್ರಮವಿಲ್ಲ. ಒಗ್ಗರಣೆಯೂ ಬೇಡ.

ಸೋರೆಕಾಯಿ - Bottle Gourd

ಸೋರೆಕಾಯಿಯ ರುಚಿಕರ ಅಡುಗೆಗಳು

ಸೋರೆಕಾಯಿಯಿಂದ ಪಲ್ಯ, ಸಾಂಬಾರು, ಮಜ್ಜಿಗೆ ಹುಳಿ, ದೋಸೆ, ಕಡುಬು ಮುಂತಾದ ಪದಾರ್ಥಗಳನ್ನು ತಯಾರಿಸಬಹುದು. ಬೆಂದ ಸೋರೆಕಾಯಿ ದೇಹಕ್ಕೆ ತಂಪನ್ನುಂಟುಮಾಡುವ ಖಾದ್ಯವಸ್ತು. ಇದು ಗರ್ಭಿಣಿಯರಿಗೆ ಉತ್ತಮ ಆಹಾರ. ಸೋರೆಕಾಯಿಯಿಂದ ತಯಾರಿಸಿದ ಸಾರು ಕ್ಷಯ, ಉನ್ಮಾದ, ಅಧಿಕ ರಕ್ತದೊತ್ತಡ, ಮೂಲವ್ಯಾಧಿ, ಮಧುಮೇಹ, ಕಾಮಾಲೆ, ಜಠರದ ಹುಣ್ಣು ಇತ್ಯಾದಿ ವ್ಯಾಧಿಗಳಿಂದ ನರಳುವ ರೋಗಿಗಳಿಗೆ ಉತ್ತಮ ಆಹಾರ.

ಸೋರೆಕಾಯಿ ಸಿಪ್ಪೆ ಚಟ್ನಿ



ಬೇಕಾಗುವ ವಸ್ತುಗಳು: 1 ಕಪ್ ಸೋರೆಕಾಯಿ ಸಿಪ್ಪೆ, 3/4 ಕಪ್ ತೆಂಗಿನತುರಿ, 2-3 ಎಸಳು ಬೆಳ್ಳುಳ್ಳಿ, 2-3 ಹಸಿಮೆಣಸು, 1/2 ಚಮಚ ಹುಳಿರಸ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, ಸ್ವಲ್ಪ ಕರಿಬೇವು, 1 ಚಮಚ ಎಣ್ಣೆ

ಮಾಡುವ ವಿಧಾನ: ಸೋರೆಕಾಯಿ ಸಿಪ್ಪೆ, ಉಪ್ಪು, ಹುಳಿ ಮತ್ತು ಸ್ವಲ್ಪ ನೀರು ಸೇರಿಸಿ ಬೇಯಿಸಿ. ನಂತರ ಬೆಳ್ಳುಳ್ಳಿ ಜಜ್ಜಿ ಸಿಪ್ಪೆ ತೆಗೆದು, ಸ್ವಲ್ಪ ಎಣ್ಣೆ ಹಾಕಿ ಹುರಿದು, ತೆಂಗಿನ ತುರಿ, ಹಸಿಮೆಣಸು, ಹುರಿದ ಬೆಳ್ಳುಳ್ಳಿ, ಬೇಯಿಸಿದ ಸೋರೆಕಾಯಿ ಸಿಪ್ಪೆ ಎಲ್ಲ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸು, ಕರಿಬೇವಿನೆಲೆ ಹಾಕಿ ಒಗ್ಗರಣೆ ಕೊಡಿ. ಈ ರುಚಿಯಾದ, ಪೌಷ್ಠಿಕವಾದ ಚಟ್ನಿ ದೋಸೆ, ಚಪಾತಿ, ಅನ್ನದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.







ಸೋರೆಕಾಯಿ ಸಿಹಿ ಅಪ್ಪ



ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 2 ಕಪ್ ಸೋರೆಕಾಯಿ ತುಂಡು, 1/2 ಕಪ್ ಅವಲಕ್ಕಿ, 1/4 ಚಮಚ ಏಲಕ್ಕಿ ಪುಡಿ, ಚಿಟಿಕಿ ಉಪ್ಪು, 1 ಕಪ್ ಬೆಲ್ಲ, 2-3 ಚಮಚ ತುಪ್ಪ

ಮಾಡುವ ವಿಧಾನ: ಅಕ್ಕಿಯನ್ನು 2-3 ಗಂಟೆ ನೆನೆಸಿ. ನಂತರ ತೊಳೆದು ಸಿಪ್ಪೆ ಮತ್ತು ತಿರುಳು ತೆಗೆದು ಸಣ್ಣಗೆ ತುಂಡುಮಾಡಿದ ಸೋರೆಕಾಯಿ, ನೆನೆಸಿಟ್ಟ ಅವಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೆಲ್ಲ ಉಪ್ಪು ಸೇರಿಸಿ ರುಬ್ಬಬೇಕು. ರುಬ್ಬುವಾಗ ನೀರು ಹಾಕುವ ಅಗತ್ಯವಿದ್ದರೆ ಮಾತ್ರವೇ ನೀರು ಹಾಕಿ. ನಂತರ ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಸ್ವಲ್ಪ ಗಟ್ಟಿಯಾಗುವವರೆಗೆ ತೊಳಸಿ. ನಂತರ ಅಪ್ಪದ ಕಾವಲಿಗೆಯ ಗುಳಿಗೆ ತುಪ್ಪ ಹಾಕಿ ಬಿಸಿಯಾದಾಗ ಹಿಟ್ಟು ಹಾಕಿ, ಬೆಂದು ತಳ ಬಿಟ್ಟಾಗ ಒಂದು ಕಡ್ಡಿಯಿಂದ ಚುಚ್ಚಿ ಕವುಚಿಹಾಕಿ ಬೇಯಿಸಿ. ಕೆಂಪಗೆ ಆದಾಗ ತೆಗೆಯಿರಿ. ಈ ಅಪ್ಪ ಸವಿಯಲು ಸ್ವಾದಿಷ್ಟವಾಗಿರುತ್ತದೆ.






ಸೋರೆಕಾಯಿ ಪೋಡಿ



ಬೇಕಾಗುವ ವಸ್ತುಗಳು: ಸಿಪ್ಪೆ ಮತ್ತು ಬೀಜ ತೆಗೆದು ತ್ರಿಕೋನಾಕಾರದಲ್ಲಿ ತುಂಡುಮಾಡಿದ ಸೋರೆಕಾಯಿ 1 ಕಪ್, 1 ಕಪ್ ಕಡಲೆ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರದ ಪುಡಿ, ಚಿಟಿಕಿ ಇಂಗು, ಉಪ್ಪು ರುಚುಗೆ ತಕ್ಕಷ್ಟು, ಕರಿಯಲು ಬೇಕಾದಷ್ಟು ಎಣ್ಣೆ

ಮಾಡುವ ವಿಧಾನ: ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಇಂಗು, ಉಪ್ಪು, ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪಗೆ ಕಲಸಿ. ತ್ರಿಕೋನಾಕಾರದಲ್ಲಿ ತುಂಡುಮಾಡಿದ ಸೋರೆಕಾಯಿ ಬಿಲ್ಲೆಗಳನ್ನು ಈ ಮಿಶ್ರಣದಲ್ಲಿ ಅದ್ದಿ ತೆಗೆದು ಬಿಸಿಯಾದ ಎಣ್ಣೆಯಲ್ಲಿ ಹಾಕಿ ಹದ ಉರಿಯಲ್ಲಿ ಕರಿದು ತೆಗೆಯಿರಿ. ಈಗ ತಿನ್ನಲು ರುಚಿಯಾದ ಪೋಡಿ ಸಿದ್ಧ.










ಸೋರೆಕಾಯಿ ನಿಪ್ಪಟ್ಟು


ಬೇಕಾಗುವ ವಸ್ತುಗಳು: 1 ಕಪ್ ಅಕ್ಕಿ ಹಿಟ್ಟು, 1 ಕಪ್ ಚಿರೋಟಿ ರವೆ, 2 ಚಮಚ ಹುರಿದ ಶೇಂಗಾ ಬೀಜದ ಪುಡಿ, 2 ಎಸಳು ಕರಿಬೇವು, 2-3 ಹಸಿಮೆಣಸು, 2 ಚಮಚ ಬಿಳಿ ಎಳ್ಳು, ರುಚಿಗೆ ತಕ್ಕ ಉಪ್ಪು, 2 ಚಮಚ ಕೊತ್ತಂಬರಿಸೊಪ್ಪು, 1/2 ಕಪ್ ಸೋರೆಕಾಯಿ ತುರಿ, ಚಿಟಿಕಿ ಇಂಗು

ಮಾಡುವ ವಿಧಾನ: ಬಾಣಲೆ ಒಲೆಯಮೇಲಿಟ್ಟು ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ಬಿಸಿಮಾಡಿ ಕೆಳಗಿಳಿಸಿ. ಹಸಿಮೆಣಸು, ಇಂಗು, ಕರಿಬೇವು, ಕೊತ್ತಂಬರಿಸೊಪ್ಪು ರುಬ್ಬಿ. ಇದಕ್ಕೆ ಅಕ್ಕಿಹಿಟ್ಟು, ಚಿರೋಟಿರವೆ, ಹುರಿದ ಶೇಂಗಾಬೀಜದ ಪುಡಿ, ಬಿಳಿ ಎಳ್ಳು, ಸೋರೆಕಾಯಿ ತುರಿ, ಉಪ್ಪು ಹಾಕಿ ಗಟ್ಟಿಗೆ ಕಲಸಿ. ನಂತರ ಉಂಡೆಮಾಡಿ. ನಂತರ ಎಣ್ಣೆಪಸೆಮಾಡಿದ ಬಾಳೆಲೆಯ ಮೇಲೆ ತಟ್ಟಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿಗರಿಯಾದ ನಿಪ್ಪಟ್ಟು ಸಂಜೆಯ ಕಾಫಿಯೊಂದಿಗೆ ಸವಿಯಲು ಸಿದ್ಧ.




ಪತ್ರೊಡೆ - PATHRODE

ಪತ್ರೊಡೆಯಲ್ಲಿ ವಿವಿಧ ವೈವಿಧ್ಯ

ಈಗ ಕೆಸುವಿನೆಲೆ ಎಲ್ಲಾ ಕಡೆಯೂ ಧಾರಾಳವಾಗಿ ಸಿಗುತ್ತದೆ. ಪತ್ರೊಡೆಯಲ್ಲಿ ಅನೇಕ ರೀತಿಯ ಬದಲಾವಣೆ ಮಾಡಿ ತಿನ್ನಬಹುದು. ಕೆಸುವಿನೆಲೆಯಲ್ಲಿ ಕಬ್ಬಿಣಾಂಶವಿದೆ. ಉಷ್ಣಗುಣವುಳ್ಳ ಕೆಸುವಿನೆಲೆ ಅಡುಗೆ ಮಾಡುವಾಗ ತಂಪು ಗುಣಗಳುಳ್ಳ ವಸ್ತುಗಳನ್ನು ಉಪಯೋಗಿಸುವುದರಿಂದ ಕೆಸುವಿನ ಉಷ್ಣಗುಣ ಕಡಿಮೆಯಾಗುವುದು.

ಜೀರಿಗೆ ಪತ್ರೊಡೆ ಬೆಂದಿ




ಬೇಕಾಗುವ ವಸ್ತುಗಳು: 2 ಕಪ್ ತೆಂಗಿನತುರಿ, 1 ಒಣಮೆಣಸು, 1 ಚಮಚ ಜೀರಿಗೆ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಾಸಿವೆ, 1/2 ಚಮಚ ಉದ್ದಿನಬೇಳೆ, 1/2 ಒಣಮೆಣಸು, 1 ಚಮಚ ಎಣ್ಣೆ, 2 ಕಪ್ ಪತ್ರೊಡೆ ತುಂಡುಗಳು.

ಮಾಡುವ ವಿಧಾನ: ತೆಂಗಿನ ತುರಿಗೆ ಒಂದು ಒಣಮೆಣಸು, ಸ್ವಲ್ಪ ನೀರು ಸೇರಿಸಿ ರುಬ್ಬಿ ತೆಗೆಯಿರಿ. ನಂತರ ದೋಸೆ ಹಿಟ್ಟಿನಷ್ಟು ತೆಳ್ಳಗೆ ಮಾಡಿ ಪಾತ್ರೆಗೆ ಹಾಕಿ ಕುದಿಸಿ. ಉಪ್ಪು ಹಾಕಿ. ನಂತರ ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ, ಒಣಮೆಣಸು ಹಾಕಿ ಒಗ್ಗರಣೆ ಕೊಡಿ. ನಂತರ ತುಂಡುಮಾಡಿದ ಪತ್ರೊಡೆ ಹಾಕಿ ಚೆನ್ನಾಗಿ ತೊಳಸಿ. ಸ್ವಲ್ಪ ಹೊತ್ತಿನ ನಂತರ ತಿಂದರೆ ರುಚಿಯಾಗಿರುತ್ತದೆ.










ಪತ್ರೊಡೆ ಮೊಸರು ಬೆಂದಿ




ಬೇಕಾಗುವ ವಸ್ತುಗಳು: 2 ಕಪ್ ತೆಂಗಿನತುರಿ, 1/2 ಕಪ್ ಮೊಸರು, ರುಚಿಗೆ ತಕ್ಕ ಉಪ್ಪು, 2 ಕಪ್ ಪತ್ರೊಡೆ ತುಂಡುಗಳು, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪು ಮೆಣಸು, 1 ಚಮಚ ಎಣ್ಣೆ

ಮಾಡುವ ವಿಧಾನ: ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಸ್ವಲ್ಪ ತೆಳ್ಳಗೆ ಮಾಡಿ ಉಪ್ಪು ಮೊಸರು ಹಾಕಿ, ಸಣ್ಣಗೆ ಹೆಚ್ಚಿದ ಪತ್ರೊಡೆ ಹಾಕಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸು ತುಂಡು ಹಾಕಿ ಒಗ್ಗರಣೆ ಕೊಡಿ.










ಪತ್ರೊಡೆ




ಬೇಕಾಗುವ ವಸ್ತುಗಳು: 1ಕಪ್ ಕುಚ್ಚಿಲಕ್ಕಿ, 1 ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ತೆಂಗಿನ ತುರಿ, 1/2 ನಿಂಬೆಗಾತ್ರದ ಹುಳಿ, 1/4 ಅಚ್ಚು ಬೆಲ್ಲ, 3-4 ಕೆಂಪು ಮೆಣಸು, 1/4 ಚಮಚ ಅರಸಿನ, ರುಚಿಗೆ ತಕ್ಕ ಉಪ್ಪು, 1 ಚಮಚ ಕೊತ್ತಂಬರಿ, 1/2 ಚಮಚ ಜೀರಿಗೆ

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು 5-6 ಗಂಟೆ ನೆನೆಸಿ ತೆಂಗಿನ ತುರಿ ಜೊತೆಗೆ ಹುಳಿ ಉಪ್ಪು ಬೆಲ್ಲ ಕೊತ್ತಂಬರಿ ಜೀರಿಗೆ ಅರಸಿನ ಸೇರಿಸಿ ನುಣ್ಣಗೆ ರುಬ್ಬಿ. ಅಕ್ಕಿಯನ್ನು ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿ. ರುಬ್ಬುವಾಗು ತೆಂಗಿನ ತುರಿಯ ಮಿಶ್ರಣ ಸೇರಿಸಿ. ಕೆಸುವಿನ ಎಲೆಗಳನ್ನು ತೊಳೆದು ಸಣ್ಣಗೆ ಹೆಚ್ಚಿ ಈ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ನಂತರ ಬಾಡಿಸಿ ತೊಳೆದ ಬಾಳೆಲೆಯಲ್ಲಿ ಕಲಸಿದ ಹಿಟ್ಟು 3 ಸೌಟು  ಹಾಕಿ ಮಡಿಸಿ. ಇಡ್ಲಿ ಪಾತ್ರೆಯಲ್ಲಿ 1 ರಿಂದ 1 1/2 ಗಂಟೆ ಉಗಿಯಲ್ಲಿ ಬೇಯಿಸಿ. ಪತ್ರೊಡೆ ಬಿಸಿಯಿರುವಾಗಲೇ ಕೊಬ್ಬರಿ ಎಣ್ಣೆಯೊಂದಿಗೆ ತಿನ್ನಲು ರುಚಿ.
ಇದರಿಂದ ಮೇಲೆ ಬರೆದ ವಿವಿಧ ಖಾದ್ಯ ತಯಾರಿಸಿ ತಿನ್ನಬಹುದು.






ಪತ್ರೊಡೆ ಸಿಹಿ ಉಸ್ಲಿ




ಬೇಕಾಗುವ ವಸ್ತುಗಳು: 2 ಪತ್ರೊಡೆ, 2 ಕಪ್ ತೆಂಗಿನ ತುರಿ, 4 ಚಮಚ ಎಣ್ಣೆ, 1 ಚಮಚ ಸಾಸಿವೆ, 2 ಚಮಚ ಉದ್ದಿನಬೇಳೆ, 1/4 ಕಪ್ ಬೆಲ್ಲ, 1 ಒಣಮೆಣಸು, 1 ಎಸಳು ಕರಿಬೇವು

ಮಾಡುವ ವಿಧಾನ: ಪತ್ರೊಡೆಯನ್ನು ಸಣ್ಣಗೆ ತುಂಡುಮಾಡಿ ಬೆಲ್ಲ ಪುಡಿಮಾಡಿ ತೆಂಗಿನ ತುರಿಗೆ ಬೆರೆಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು, ಎಣ್ಣೆ ಹಾಕಿ, ಬಿಸಿಯಾದಾಗ ಸಾಸಿವೆ ಹಾಕಿ ನಂತರ ಒಣಮೆಣಸು, ಕರಿಬೇವು ಹಾಕಿ. ಬೆಲ್ಲ ಬೆರೆಸಿದ ತೆಂಗಿನ ತುರಿಗೆ ಪುಡಿಮಾಡಿದ ಪತ್ರೊಡೆ ಸೇರಿಸಿ ಚೆನ್ನಾಗಿ ಕಲಸಿ. ನಂತರ ಮೇಲಿನ ಬಾಣಲೆಯಲ್ಲಿದ್ದ ಒಗ್ಗರಣೆಗೆ ಹಾಕಿ ಬಿಸಿಯಾದಾಗ ಕೆಳಗಿಳಿಸಿ. ರುಚಿಯಾದ ಪತ್ರೊಡೆ, ಸಿಹಿ ಉಸ್ಲಿ ತಿನ್ನಲು ಸಿದ್ಧ.








ಅಷ್ಟಮಿ ಲಾಡುಗಳು - Ashtami Laddus

ಅಷ್ಟಮಿ ಹಬ್ಬದ ಲಾಡುಗಳು

ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತೆ ಬಂದಿದೆ. ಕೃಷ್ಣನಿಗೆ ಚಕ್ಕುಲಿ ಕೋಡುಬಳೆ ಲಾಡುಗಳೆಂದರೆ ಪಂಚಪ್ರಾಣ. ಅವನಿಗೆ ಪ್ರಿಯವಾದ ಲಾಡುಗಳನ್ನು ಮಾಡಿ, ನೈವೇದ್ಯ ಮಾಡಿ, ಅವನ ಕೃಪೆಗೆ ಪಾತ್ರರಾಗೋಣ.

ಅವಲಕ್ಕಿ ಲಾಡು



ಬೇಕಾಗುವ ವಸ್ತುಗಳು: 1 ಕಪ್ ಗಟ್ಟಿ ಅವಲಕ್ಕಿ, 1 ಕಪ್ ಸಕ್ಕರೆ ಪುಡಿ, 1/2 ಕಪ್ ಕೊಬ್ಬರಿ ತುರಿ, 1 ಚಮಚ ಏಲಕ್ಕಿ ಪುಡಿ, 1 ಕಪ್ ತುಪ್ಪ

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು, ಅವಲಕ್ಕಿ ಹಾಕಿ, ಕೆಂಪಗೆ ಗರಿಗರಿಯಾಗುವ ತನಕ ಹುರಿದು ಕೆಳಗಿಳಿಸಿ. ನಂತರ ಮಿಕ್ಸಿಗೆ ಹಾಕಿ ಪುಡಿಮಾಡಿ. ಇದಕ್ಕೆ ಸಕ್ಕರೆ ಪುಡಿ, ಕೊಬ್ಬರಿ ತುರಿ, ಏಲಕ್ಕಿ ಪುಡಿ ಸೇರಿಸಿ ಒಂದು ಸುತ್ತು ಮಿಕ್ಸಿಯಲ್ಲಿ ತಿರುಗಿಸಿ. ನಂತರ ಬೌಲ್ ಗೆ ಹಾಕಿ. ಬಳಿಕ ತುಪ್ಪ ಸೇರಿಸಿ ಉಂಡೆ ಕಟ್ಟಿ. ಈಗ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ಉಂಡೆ ರೆಡಿ.







ಎಳ್ಳುಂಡೆ



ಬೇಕಾಗುವ ವಸ್ತುಗಳು: 1 ಕಪ್ ಬಿಳಿ ಎಳ್ಳು, 3/4 ಕಪ್ ಬೆಲ್ಲ, 2 ಚಮಚ ತುಪ್ಪ

ಮಾಡುವ ವಿಧಾನ: ಎಳ್ಳನ್ನು ಕಲ್ಲು ಮಣ್ಣು ತೆಗೆದು ತೊಳೆದು ಬಿಸಿಲಿನಲ್ಲಿ ಮೊದಲೇ ಒಣಗಿಸಿ ಇಡಿ. ನಂತರ ಬಾಣಲೆಯಲ್ಲಿ ಸ್ವಲ್ಪ ಸ್ವಲ್ಪ ಹಾಕಿ ಹುರಿಯಿರಿ. ನಂತರ ಮಿಕ್ಸಿಗೆ ಹಾಕಿ ತರಿತರಿಯಾಗಿ ಪುಡಿಮಾಡಿ. ನಂತರ ಬೆಲ್ಲದ ಪುಡಿ ಏಲಕ್ಕಿ ಪುಡಿ ಹಾಕಿ ಒಂದು ಸುತ್ತು ತಿರುಗಿಸಿ ಬೌಲ್ ಗೆ ಹಾಕಿ. ಸ್ವಲ್ಪ ತುಪ್ಪ ಹಾಕಿ ಉಂಡೆ ಕಟ್ಟಿ. ಈಗ ರುಚಿಯಾದ ದಿಢೀರ್ ಆಗಿ ಮಾಡುವ ಎಳ್ಳುಂಡೆ ಸವಿಯಲು ಸಿದ್ದ.












ಅರಳುಂಡೆ (ಹೊದಳುಂಡೆ)




ಬೇಕಾಗುವ ವಸ್ತುಗಳು: 1/4 ಕಿಲೋ ಅರಳು, 150 ಗ್ರಾಂ ಬೆಲ್ಲ

ಮಾಡುವ ವಿಧಾನ: ಅರಳನ್ನು ಕುಟ್ಟಿ ಪುಡಿಮಾಡಿ, ಯಾ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ನೀರು, ಬೆಲ್ಲ ಹಾಕಿ ತಿರುಗಿಸಿ. ಬೆಲ್ಲ ಕರಗಿ ನೂಲು ಪಾಕವಾದಾಗ ಒಲೆಯಿಂದ ಇಳಿಸಿ. ಅರಳಿನ ಪುಡಿ ಹಾಕಿ ಸರಿಯಾಗಿ ಮಗುಚಿ. ನಂತರ ಒರಳಿನಲ್ಲಿ ಹಾಕಿ ಕುಟ್ಟಬೇಕು. ಆಮೇಲೆ ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿ. ಈಗ ಸ್ವಾದಿಷ್ಟವಾದ ಲಾಡು ಸಿದ್ಧ.














ರವಾ ಲಾಡು




ಬೇಕಾಗುವ ವಸ್ತುಗಳು: 2 ಕಪ್ ಸಣ್ಣ ರವೆ, 2 ಕಪ್ ಸಕ್ಕರೆ, 1/2 ಕಪ್ ತುಪ್ಪ, 3 ಏಲಕ್ಕಿ, 6-7 ಗೋಡಂಬಿ, 20 ಗ್ರಾಂ ದ್ರಾಕ್ಷಿ, 1/4 ಕಪ್ ಹಾಲು.
ಮಾಡುವ ವಿಧಾನ: ಬಾಣಲೆ ಒಲೆಯಮೇಲಿಟ್ಟು ತುಪ್ಪ ಹಾಕಿ. ಸ್ವಲ್ಪ ಕೆಂಪಗೆ ಪರಿಮಳ ಬರುವವರೆಗೆ ರವೆ ಹಾಕಿ ಹುರಿದು ಕೆಳಗಿಳಿಸಿ. ನಂತರ ಸಕ್ಕರೆ ಮಿಕ್ಸಿಯಲ್ಲಿ ಪುಡಿ ಮಾಡಿ, ಹುರಿದ ರವೆಗೆ ಬೆರೆಸಿ. ನಂತರ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷೆ, ಗೋಡಂಬಿ ಚೂರು ಎಲ್ಲ ಹಾಕಿ ಚೆನ್ನಾಗಿ ತೊಳಸಿ. ನಂತರ ಹಾಲು ಚಿಮುಕಿಸಿ ಉಂಡೆ ಕಟ್ಟಿ. ಈಗ ರವಾ ಲಾಡು ಕೃಷ್ಣನ ನೈವೇದ್ಯಕ್ಕೆ ಸಿದ್ಧ. ಬೇಕಿದ್ದರೆ ಸ್ವಲ್ಪ ಕೊಬ್ಬರಿ ತುರಿ ಉಂಡೆ ಕಟ್ಟುವಾಗ ಸೇರಿಸಬಹುದು.




ಕಣಿಲೆ - BAMBOO SHOOTS

ಕಣಿಲೆಯ ರುಚಿಕರ ಅಡುಗೆಗಳು

ಈಗ ಮಳೆಗಾಲ. ಈ ಸಮಯದಲ್ಲಿ ಸಿಗುವ ಕಣಿಲೆಯಿಂದ ರುಚಿಕರ ಅಡುಗೆ ಮಾಡಬಹುದು. ಇದು ರುಚಿಕರವಾದ ಮತ್ತು ಆರೋಗ್ಯಕರವಾದ ಆಹಾರ. ತೇವದ ತಂಪಿನ ಹವಾಮಾನಕ್ಕೆ ಹೇಳಿಮಾಡಿಸಿದಂಥ ತರಕಾರಿ. ಆದರೆ ಉಷ್ಣ ಗುಣಉಳ್ಳ ತರಕಾರಿಯಾದ್ದರಿಂದ ಮಿತವಾಗಿ ತಿನ್ನಬೇಕು. ತಾಜಾ ಕಣಿಲೆ ಹಾಗೇ ಬಳಸುವಂತಿಲ್ಲ. ಚಕ್ರಾಕಾರವಾಗಿ ತುಂಡುಮಾಡಿ ನೀರಿನಲ್ಲಿ ಎರಡು ಮೂರು ದಿನ ನೆನೆಸಿ ನಂತರ ಉಪಯೋಗಿಸಿಬೇಕು. ತಾಜಾ ಕಣಿಲೆಯನ್ನು ಕಿತ್ತು ತಂದ ದಿನವೇ ಉಪಯೋಗಿಸಿಬೇಕೆಂದಿದ್ದರೆ ಬೇಯಿಸಿ ನೀರನ್ನು ಚೆಲ್ಲಿ ನಂತರ ಉಪಯೋಗಿಸಿ.

ಕಣಿಲೆ-ಹೆಸರುಕಾಳು ಪಲ್ಯ



ಬೇಕಾಗುವ ವಸ್ತುಗಳು: 1 ಕಪ್ ಸಣ್ಣಗೆ ಹೆಚ್ಚಿದ ಕಣಿಲೆ, 1/2 ಕಪ್ ಹೆಸರು ಕಾಳು, 1/2 ಚಮಚ ಕೆಂಪುಮೆಣಸಿನ ಪುಡಿ, 1/2 ಚಮಚ ಬೆಲ್ಲ, ಚಿಡಿಕಿ ಅರಸಿನ, ರುಚಿಗೆ ತಕ್ಕ ಉಪ್ಪು, 1 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1/2 ಚಮಚ ಉದ್ದಿನಬೇಳೆ,  1 ಎಸಳು ಕರಿಬೇವಿನೆಲೆ, 1/4 ಕಪ್ ತೆಂಗಿನ ತುರಿ, ಸಣ್ಣ ತುಂಡು ಕೆಂಪು ಮೆಣಸು.

ಮಾಡುವ ವಿಧಾನ: ಕಣಿಲೆಯ ಸಿಪ್ಪ ತೆಗೆದು ಚಕ್ರಾಕಾರವಾಗಿ ಕತ್ತರಿಸಿ ನೀರಿಗೆ ಹಾಕಿ. ಮಾರನೆ ದಿನ ನೀರು ಚೆಲ್ಲಿ, ಕಣಿಲೆ ಸಣ್ಣಗೆ ಹೆಚ್ಚಿ ಒಂದು ಪಾತ್ರೆಯಲ್ಲಿ 3 ಕಪ್ ನೀರು ಹಾಕಿ ಕುದಿಸಿ. ಹೆಚ್ಚಿದ ಕಣಿಲೆ ಸೇರಿಸಿ ಬೇಯಿಸಿ. ನೀರು ಚೆಲ್ಲಿ. ಹೆಸರುಕಾಳು ನೆನೆಸಿ ತೊಳೆದು ಬೇಯಿಸಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ,  ಉದ್ದಿನಬೇಳೆ, ಕರಿಬೇವಿನೆಲೆ, ಕೆಂಪು ಮೆಣಸು ಹಾಕಿ ನಂತರ ಒಗ್ಗರಣೆ ಸಿಡಿದಾಗ ಬೇಯಿಸಿದ ಕಣಿಲೆ, ಬೇಯಿಸಿದ ಹೆಸರುಕಾಳು, ಸ್ವಲ್ಪ ನೀರು, ಕೆಂಪುಮೆಣಸಿನ ಪುಡಿ, ಬೆಲ್ಲ, ಅರಸಿನ, ಉಪ್ಪು ಸೇರಿಸಿ ಮುಚ್ಚಿಡಿ. ನೀರೆಲ್ಲಾ ಆರಿದ ಮೇಲೆ ಕಾಯಿತುರಿ ಹಾಕಿ ಸ್ವಲ್ಪ ತೊಳಸಿ ಒಲೆಯಿಂದ ಕೆಳಗಿಳಿಸಿ. ಈಗ ರುಚಿಕರವಾದ ಕಣಿಲೆ ಪಲ್ಯ ಊಟದೊಂದಿಗೆ ಸವಿಯಲು ಸಿದ್ಧ.





ಕಣಿಲೆ ಗಸಿ



ಬೇಕಾಗುವ ವಸ್ತುಗಳು: 1 ಕಪ್ ಸಣ್ಣಗೆ ಹೆಚ್ಚಿದ ಕಣಿಲೆ, 1/2 ಕಪ್ ತೊಗರಿಬೇಳೆ, 1 ಚಮಚ ಕೊತ್ತಂಬರಿ, 1 ಚಮಚ ಉದ್ದಿನಬೇಳೆ, 1/4 ಚಮಚ ಮೆಂತೆ, 1/4 ಚಮಚ ಜೀರಿಗೆ, 1/2 ಚಮಚ ಹುಳಿರಸ, 1/2 ಚಮಚ ಬೆಲ್ಲ, 1/4 ಕೆಂಪುಮೆಣಸು ಪುಡಿ, 4-5 ಒಣಮೆಣಸು, ಚಿಟಿಕಿ ಅರಸಿನ, ರುಚಿಗೆ ತಕ್ಕ ಉಪ್ಪು, 2 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1 ಎಸಳು ಕರಿಬೇವಿನೆಲೆ, ಸಣ್ಣ ತುಂಡು ಕೆಂಪುಮೆಣಸು, 2 ಕಪ್ ತೆಂಗಿನತುರಿ.

ಮಾಡುವ ವಿಧಾನ: ಮೇಲಿನಂತೆ ನೀರಲ್ಲಿ ಹಾಕಿದ ಕಣಿಲೆಯನ್ನು ಮಾರನೆ ದಿನ ನೀರು ಚೆಲ್ಲಿ ಸಣ್ಣಗೆ ಹೆಚ್ಚಿ, ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ, ಹೆಚ್ಚಿದ ಕಣಿಲೆ ಸೇರಿಸಿ ಬೇಯಿಸಿ ನೀರು ಚೆಲ್ಲಿ. ತೊಗರಿಬೇಳೆ ಬೇಯಿಸಿ ನಂತರ ಕಣಿಲೆ ತುಂಡಿಗೆ ಉಪ್ಪು ಮೆಣಸಿನಪುಡಿ, ಬೆಲ್ಲ, ಸ್ವಲ್ಪ ಹುಳಿ, ನೀರು ಸೇರಿಸಿ ಬೇಯಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬೆಸಿಯಾದಾಗ ಕೊತ್ತಂಬರಿ, ಉದ್ದಿನಬೇಳೆ, ಮೆಂತೆ, ಜೀರಿಗೆ, ಕೆಂಪುಮೆಣಸು ಹಾಕಿ ಹುರಿದು ಅರಸಿನ ಸೇರಿಸಿ. ಉದ್ದಿನಬೇಳೆ ಕೆಂಪಗಾಗುವಂತೆ ಹುರಿಯಿರಿ. ತೆಂಗಿನ ತುರಿ, ಹುರಿದ ಮಸಾಲೆ, ಸ್ವಲ್ಪ ನೀರು ಸೇರಿಸಿ ರುಬ್ಬಿ.  ಬೆಂದ ಕಣಿಲೆಗೆ ರುಬ್ಬಿದ ಮಸಾಲೆ, ಬೇಯಿಸಿದ ತೊಗರಿಬೇಳೆ, ಸಾಕಷ್ಟು ನೀರು ಸೇರಿಸಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನೆಲೆ, ಒಣಮೆಣಸು ಹಾಕಿ ಒಗ್ಗರಣೆ ಕೊಡಿ. ಈಗ ಘಮಘಮಿಸುವ ಕಣಿಲೆ ಗಸಿ ಚಪಾತಿ, ಅನ್ನ, ರೊಟ್ಟಿಯೊಂದಿಗೆ ಸೇವಿಸಲು ರುಚಿಯಾಗಿರುತ್ತದೆ.





ಕಣಿಲೆ ಉಪ್ಪಿನಕಾಯಿ




ಬೇಕಾಗುವ ವಸ್ತುಗಳು: 1 ಕಪ್ ಕಣಿಲೆ ಹೋಳು, 1 ಕಪ್ ಬೇಯಿಸಿದ ಲಿಂಬೆ ಹೋಳು ಅಥವಾ ಉಪ್ಪು ಬೆರೆಸಿದ ಹಸಿ ಅಂಬಟೆ ಹೋಳು, 3/4 ಚಮಚ ಅರಸಿನ ಪುಡಿ, 1/2 ಕಪ್ ಸಾಸಿವೆ, 2 ಕಪ್ ಉಪ್ಪಿನಕಾಯಿ ಮೆಣಸು, 1/2 ಹಿಡಿ ಉಪ್ಪು, ಸ್ವಲ್ಪ ಇಂಗು

ಮಾಡುವ ವಿಧಾನ: ಎಳೆಯ ಕಣಿಲೆಯನ್ನು 1/2 ಅಂಗುಲ ಹೋಳುಗಳನ್ನಾಗಿ ಹೆಚ್ಚಿ, ನೀರಲ್ಲಿ ಹಾಕಿಡಿ. ಮೂರನೇ ದಿನ ನೀರು ಬಸಿದು ತೊಳೆದು ಬೇರೆ 1/2 ಲೀಟರ್ ನೀರು ಹಾಕಿ ಚೆನ್ನಾಗಿ ಕುದಿಸಿ ನೀರು ಬಸಿಯಿರಿ. ಈ ಹೋಳಿಗೆ, ಉಪ್ಪು, 2 ಕಪ್ ನೀರು ಹಾಕಿ ಚೆನ್ನಾಗಿ ಕುದಿಸಿ, ಹೋಳನ್ನು ಆರಿಸಿ ತೆಗೆದು ಆರಲು ಬಿಡಿ. ಉಪ್ಪುನೀರಲ್ಲಿ ಮೆಣಸು, ಸಾಸಿವೆ, ಇಂಗು, ಅರಸಿನಪುಡಿ ಸೇರಿಸಿ ನುಣ್ಣಗೆ ರುಬ್ಬಿ. ಆರಿದ ಕಣಿಲೆ ಹೋಳಿಗೆ ಬೆರೆಸಿ ಬಾಟಲಿಗೆ ಹಾಕಿ ಭದ್ರವಾಗಿ ಮುಚ್ಚಿ. ಬಾಟಲಿಗೆ ಹಾಉವ ಮೊದಲು, ಬೇಯಿಸಿದ ಲಿಂಬೆ ಹೋಳು ಯಾ ಹಸಿ ಅಂಬಟೆ ಹೋಳು ಹಾಕಿ ಸರಿಯಾಗಿ ಬೆರೆಸಿ. ಈ ಉಪ್ಪಿನಕಾಯಿ ಗಂಜಿ, ಅನ್ನದೊಂದಿಗೆ ಸವಿಯಲು ಚೆನ್ನ.


ಹಲಸಿನ ಹಣ್ಣು - Jack Fruit

ಹಲಸಿನ ಹಣ್ಣಿನ ರುಚಿಕರ ಅಡುಗೆಗಳು

ಈಗ ಹಲಸಿನ ಹಣ್ಣು ಧಾರಾಳವಾಗಿ ಸಿಗುವ ಸಮಯ. "ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು" ಎಂಬ ಮಾತಿದೆ. ಹಣ್ಣಿನಲ್ಲಿ ವಿವಿಧ ಪೋಷಕಾಂಶಗಳೂ ಇವೆ. ಆದರೆ ಮಿತವಾಗಿ ತಿನ್ನಬೇಕು.

ಹಲಸಿನ ಹಣ್ಣಿನ ಕೊಟ್ಟಿಗೆ (ಕಡುಬು)



ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 2 ಕಪ್ ಸಣ್ಣಗೆ ಹೆಚ್ಚಿದ ಹಲಸಿನ ಸೊಳೆ, 1/4 ಕಪ್ ಬೆಲ್ಲ, 4 ಚಮಚ ತೆಂಗಿನ ತುರಿ, ರುಚಿಗೆ ತಕ್ಕ ಉಪ್ಪು, 5-6 ಬಾಳೆಲೆ ತುಂಡು.

ಮಾಡುವ ವಿಧಾನ: ಬೆಳ್ತಿಗೆ 2-3 ಗಂಟೆ ನೆನೆಸಿ, ನಂತರ ತೊಳೆದು, ಸ್ವಲ್ಪ ನೀರು, ಉಪ್ಪು ಹಾಕಿ ಗಟ್ಟಿಗೆ ರುಬ್ಬಿ. ಒಲೆಯ ಮೇಲೆ ಇಡ್ಲಿ ಪಾತ್ರೆ ಇಟ್ಟು ನೀರು ಕುದಿಯಲಿಕ್ಕಿಡಿ. ನಂತರ ಸಣ್ಣಗೆ ಹೆಚ್ಚಿದ ಹಲಸಿನ ಸೊಳೆಗೆ ಪುಡಿ ಮಾಡಿದ ಬೆಲ್ಲ, ಕಾಯಿತುರಿ ಎಲ್ಲ ಹಾಕಿ ಬೆರೆಸಿ. ನಂತರ ಬಾಡಿಸಿದ ಬಾಳೆಲೆಯಲ್ಲಿ 2 ಸೌಟು ರುಬ್ಬಿದ ಅಕ್ಕಿಗೆ ಬೆರೆಸಿದ ಹಲಸಿನ ಹಣ್ಣಿನ ಮಿಶ್ರಣ ಹಾಕಿ ಮಡಚಿ. 3/4 ರಿಂದ 1 ಗಂಟೆ ತನಕ ಬೇಯಿಸಿ. ಬೇಯಿಸಿದ ಈ ಕೊಟ್ಟಿಗೆ ತಣಿದ ನಂತರ ತೆಂಗಿನೆಣ್ಣೆ ಚಟ್ನಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.





ಹಲಸಿನ ಹಣ್ಣಿನ ಶ್ಯಾವಿಗೆ (ಸೇಮಿಗೆ)



ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 1/4 ಕಪ್ ಸಣ್ಣಗೆ ತುಂಡರಿಸಿದ ಹಲಸಿನ ಹಣ್ಣು, 3-4 ಚಮಚ ಬೆಲ್ಲ, 4 ಚಮಚ ಕಾಯಿತುರಿ, ರುಚಿಗೆ ತಕ್ಕ ಉಪ್ಪು, 2 ಚಮಚ ಎಣ್ಣೆ

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು 2-3 ಗಂಟೆ ನೆನೆಸಿ, ನಂತರ ತೊಳೆದು ಸ್ವಲ್ಪ ನೀರು, ಉಪ್ಪು, ಹಲಸಿನ ಹಣ್ಣಿನ ಚೂರು, ಬೆಲ್ಲ, ಕಾಯಿತುರಿ ಸೇರಿಸಿ, ನುಣ್ಣಗೆ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದಾಗ ರುಬ್ಬಿದ ಹಿಟ್ಟು ಹಾಕಿ ಉಂಡೆ ಕಟ್ಟಲು ಬರುವಷ್ಟು ಹದಕ್ಕೆ ತೊಳಸಿ. ನಂತರ ಉಂಡೆ ಮಾಡಿ ಉಗಿಯಲ್ಲಿ 15-20 ನಿಮಿಷ ಬೇಯಿಸಿ. ನಂತರ ಬಿಸಿಯಿರುವಾಗಲೇ, ಸೇಮಿಗೆ ಮುಟ್ಟಿನಲ್ಲಿ ಒತ್ತಿ. ಈಗ ರುಚಿಯಾದ ಸೇಮಿಗೆ ತಿನ್ನಲು ಸಿದ್ಧ. ಇದನ್ನು ಹಾಗೆಯೇ ತಿನ್ನಬಹುದು ಯಾ ಉಪ್ಪುಕರಿ ಮಾಡಿ ತಿನ್ನಬಹುದು.









ಹಲಸಿನ ಹಣ್ಣು ಬೆರಟಿ ಪಾಯಸ



ಬೇಕಾಗುವ ವಸ್ತುಗಳು: 1 ಕಪ್  ಹಲಸಿನ ಹಣ್ಣು ಬೆರಟಿ, 2 ಕಪ್ ಹಸಿ ತೆಂಗಿನ ತುರಿ, 1/2 ಚಮಚ ಏಲಕ್ಕಿ ಪುಡಿ, 1 ಕಪ್ ಬೆಲ್ಲ

ಮಾಡುವ ವಿಧಾನ: ತೆಂಗಿನ ತುರಿ ರುಬ್ಬಿ, ನೀರು ಕಾಯಿಹಾಲು, ಮಂದ ಕಾಯಿಹಾಲು ತೆಗೆದಿಡಬೇಕು. ಬೆರಟಿಯನ್ನು ನೀರುಕಾಯಿಹಾಲು ಸೇರಿಸಿ ಸ್ವಲ್ಪ ಹೊತ್ತು ಇರಿಸಿ. ಬೆರಟಿ ಕರಗಿದ ನಂತರ, ಬೆಲ್ಲ, ಮಂದಕಾಯಿಹಾಲು ಸೇರಿಸಿ ಕುದಿಸಿ. ನಂತರ ಇಳಿಸಲಿಕ್ಕಾಗುವಾಗ ಏಲಕ್ಕಿಪುಡಿ, ಕೊಬ್ಬರಿ ಚೂರು ಹಾಕಬೇಕು. ಘಮಘಮಿಸುವ ರುಚಿಯಾದ ಪಾಯಸ, ಸವಿದಷ್ಟೂ ಸವಿಯಬೇಕೆನಿಸುತ್ತದೆ.





ಬೆರಟಿ ತಯಾರಿಸುವ ಕ್ರಮ: ಹಲಸಿನ ಹಣ್ಣು ಸಿಗುವ ಕಾಲದಲ್ಲಿ ಅದನ್ನು ಬಿಡಿಸಿ ಸಣ್ಣಗೆ ತುಂಡುಮಾಡಿ ಬಾಣಲೆಗೆ ಹಾಕಿ ಕಾಯಿಸಿ. ಹಣ್ಣು ಬೆಂದ ನಂತರ ಅಷ್ಟೇ ಪ್ರಮಾಣದ ಬೆಲ್ಲ ಸೇರಿಸಿ - ಉಂಡೆ ಮಾಡುವ ಹದಕ್ಕೆ ಪಾಕ ಗಟ್ಟಿಯಾಗಲಿ. ಆರಿದ ಮೇಲೆ ಉಂಡೆ ಕಟ್ಟಿ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಡಬ್ಬದಲ್ಲಿ ಇಟ್ಟರೆ ವರ್ಷವಾದರೂ ಕೆಡದು. ಬೇಕಾದಾಗ ತೆಗೆದು ಪಾಯಸ ಮಾಡಿಕೊಳ್ಳಬಹುದು. ಇದು ತಿನ್ನಲೂ ಬಲು ರುಚಿ.




ವಿ.ಸೂ: ಹಲಸಿನ ಹಣ್ಣಿನ ಕಡುಬು, ಅಪ್ಪ, ಪಾಯಸ, ಗೆಣಸಲೆ ಮುಂತಾದ ಸಿಹಿತಿಂಡಿ ಮಾಡುವಾಗ ಹಣ್ಣಿನ ಸಿಹಿ ಗುಣ ನೋಡಿಕೊಂಡು ಬೆಲ್ಲ ಹಾಕಬೇಕು. 

ಹಲಸು - JACK FRUIT

ಬೆಳೆದ ಹಲಸಿನಕಾಯಿಯ ರುಚಿಕರ ಅಡುಗೆಗಳು


ಹಲಸು ಎಲ್ಲರಿಗೂ ಪ್ರಿಯವಾಗುವ ಹಣ್ಣು. ಅದರಿಂದ ವಿವಿಧ ಅಡುಗೆಗಳನ್ನು ತಯಾರಿಸಬಹುದು. ಎಳೆ ಕಾಯಿಯಿಂದ ಹಿಡಿದು ಹಣ್ಣಿನವರೆಗೂ, ಪ್ರತಿಯೊಂದು ಹಂತದಲ್ಲೂ ಅಡುಗೆ ತಯಾರಿಸಬಹುದು. ಈಗಂತೂ ಎಲ್ಲಾಕಡೆ ಹಲಸಿನ ಮೇಳ ಕಂಡುಬರುತ್ತಿದೆ. ದೇಹಕ್ಕೆ ಬೇಕಾದ ಪೋಶಕಾಂಶಗಳು ಹಲಸಿನಲ್ಲಿವೆ. ಆದರೆ ಹದವಾಗಿ ತಿನ್ನಬೇಕು.



ಹಲಸು ಮಾವು ಬೆಂದಿ



ಬೇಕಾಗುವ ವಸ್ತುಗಳು: 1 ಕಪ್ ಹಲಸಿನ ಸೊಳೆ, 1 ಕಾಡು ಮಾವು, 2 ಕಪ್ ತೆಂಗಿನ ತುರಿ, 1 ಚಮಚ ಕೊತ್ತಂಬರಿ, 1/2 ಚಮಚ ಜೀರಿಗೆ, 3-4 ಕೆಂಪು ಮೆಣಸು, ಚಿಟಿಕಿ ಅರಸಿನ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಾಸಿವೆ, 1 ಎಸಳು ಕರಿಬೇವಿನೆಲೆ, 1 ಚಮಚ ಎಣ್ಣೆ, 1/4 ಚಮಚ ಕೆಂಪು ಮೆಣಸು ಪುಡಿ

ಮಾಡುವ ವಿಧಾನ: ಹಲಸಿನ ಸೊಳೆ, ಸ್ವಲ್ಪ ನೀರು, ಕೆಂಪುಮೆಣಸಿನ ಪುಡಿ, ಉಪ್ಪು ಸೇರಿಸಿ ಪಾತ್ರೆಗೆ ಹಾಕಿ ಬೇಯಿಸಿ. ಬೇಯುತ್ತಾ ಬಂದಾಗ ಮಾವಿನ ಹಣ್ಣಿನ ತೊಟ್ಟು ತೆಗೆದು, ತೊಳೆದು ಎರಡು ಬದಿ ಹೆಚ್ಚಿ ಸೇರಿಸಿ. ಜೀರಿಗೆ, ಕೊತ್ತಂಬರಿ, ಕೆಂಪುಮೆಣಸು, ಎಣ್ಣೆ ಹಾಕಿ ಹುರಿದು, ಅರಸಿನ ಸೇರಿಸಿ ಕಾಯಿತುರಿ ಸೇರಿಸಿ ರುಬ್ಬಿ. ನಂತರ ಬೆಂದ ತರಕಾರಿಗೆ ಸೇರಿಸಿ. ಸಾಕಷ್ಟು ನೀರು ಸೇರಿಸಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನೆಲೆ ಒಗ್ಗರಣೆ ಕೊಡಿ. ಈ ಬೆಂದಿ ಸ್ವಲ್ಪ ದಪ್ಪಗಿದ್ದರೆ ರುಚಿ ಜಾಸ್ತಿ. ಗಂಜಿಯೊಂದಿಗೆ ಸವಿಯಲು ಬಹಳ ರುಚಿ.









ಹಲಸಿನ ಗರಂ ಕೂರ್ಮ



ಬೇಕಾಗುವ ವಸ್ತುಗಳು: 1 ಕಪ್ ಹಲಸಿನ ಸೊಳೆ, 1/4 ಕಪ್ ನೀರುಳ್ಳಿ, 1 ಚಮಚ ಶುಂಠಿ, 3-4 ಬೀಜ ಬೆಳ್ಳುಳ್ಳಿ, 2 ಲವಂಗ, ಸಣ್ಣ ತುಂಡು ಚೆಕ್ಕೆ, 3-4 ಕೆಂಪುಮೆಣಸು,  1/4 ಕಪ್ ಕೊತ್ತಂಬರಿಸೊಪ್ಪು, 1/4 ಕಪ್ ಕಾಯಿತುರಿ, ಎರಡು ಚಮಚ ಎಣ್ಣೆ, 1/4 ಚಮಚ ಅರಸಿನ ಪುಡಿ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ: ಹಲಸಿನ ಸೊಳೆ, ಸ್ವಲ್ಪ ನೀರು, ಮತ್ತು ಉಪ್ಪು ಸೇರಿಸಿ ಪಾತ್ರೆಗೆ ಹಾಕಿ ಬೇಯಿಸಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಅನುಕ್ರಮವಾಗಿ, ನೀರುಳ್ಳಿ ಚೂರು, ಶುಂಠಿ ಚೂರು, ಬೆಳ್ಳುಳ್ಳಿ ಬೀಜ, ಲವಂಗ, ಚೆಕ್ಕೆ, ಕೆಂಪುಮೆಣಸು, ಕೊತ್ತಂಬರಿಸೊಪ್ಪು ಹಾಕಿ ಹುರಿದು, ಕಾಯಿತುರಿ ಸೇರಿಸಿ ರುಬ್ಬಿ. ನಂತರ ಬೆಂದ ಹಲಸಿನ ಸೊಳೆಗೆ ಸೇರಿಸಿ. ಅರಸಿನ ಪುಡಿ ಸೇರಿಸಿ. ಸ್ವಲ್ಪ ನೀರು ಸೇರಿಸಿ ಕುದಿಸಿ. ರಸ ಸಮರಸವಾದಾಗ ಒಲೆಯಿಂದ ಇಳಿಸಿ. ಪೂರಿಗೆ, ಚಪಾತಿಗೆ, ಅನ್ನದ ಜೊತೆಗೂ ರುಚಿ.









ಹಲಸಿನಕಾಯಿ ಮಜ್ಜಿಗೆ ಹುಳಿ (ಮೇಲೋಗರ)



ಬೇಕಾಗುವ ವಸ್ತುಗಳು: 1 ಕಪ್ ಸಣ್ಣಗೆ ತುಂಡುಮಾಡಿದ ಹಲಸಿನಕಾಯಿ, 2 ಕಪ್ ತೆಂಗಿನ ತುರಿ, 1/2 ಕಪ್ ಹುಳಿ ಮಜ್ಜಿಗೆ, 1 ಚಮಚ ಕೆಂಪು ಮೆಣಸಿನ ಪುಡಿ, 1 ಹಸಿಮೆಣಸು, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಾಸಿವೆ, 1/4 ಚಮಚ ಮೆಂತೆ, 1 ಎಸಳು ಕರಿಬೇವು, 1 ಒಣಮೆಣಸು, 1 ಚಮಚ ಎಣ್ಣೆ

ಮಾಡುವ ವಿಧಾನ: ಹಲಸಿನಕಾಯಿ ತುಂಡು, ಉಪ್ಪು, ಕೆಂಪುಮೆಣಸಿನ ಪುಡಿ, ಹಸಿಮೆಣಸು, ಸ್ವಲ್ಪ ನೀರು ಸೇರಿಸಿ ಪಾತ್ರೆಯಲ್ಲಿಟ್ಟು ಬೇಯಿಸಿ. ತೆಂಗಿನ ರುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿ. ಬೆಂದ ತರಕಾರಿಗೆ ಸೇರಿಸಿ, ನಂತರ ಮಜ್ಜಿಗೆ ಸೇರಿಸಿ, ಸಾಕಷ್ಟು ನೀರು ಸೇರಿಸಿ ಒಂದು ಕುದಿ ಕುದಿಸಿ. ನಂತರ ಎಣ್ಣೆಯಲ್ಲಿ, ಸಾಸಿವೆ, ಮೆಂತೆ, ಒಣಮೆಣಸು ಚೂರು, ಕರಿಬೇವಿನೆಲೆ ಹಾಕಿ ಒಗ್ಗರಣೆ ಕೊಡಿ. ಸಾಂಬಾರಿಗಿಂತ ಮಜ್ಜಿಗೆ ಹುಳಿ ದಪ್ಪಗಿರಬೇಕು. ರುಬ್ಬುವಾಗ ಹಸಿಕಾಯಿ (ತುಂಬ ಒಣಗದ ಎಳೆ ಕಾಯಿ) ತುರಿ ಹಾಕಬೇಕು.



ಕಾಡು ಮಾವಿನ ಹಣ್ಣು - Wild Mango

ಕಾಡು ಮಾವಿನ ಹಣ್ಣಿನ ರುಚಿಕರ ಅಡುಗೆಗಳು

ಈಗ ಕಾಡು ಮಾವು ಧಾರಾಳವಾಗಿ ಸಿಗುವ ಕಾಲ. ಮಾವುನಲ್ಲಿ "ಸಿ" "ಬಿ" ಜೀವಸತ್ವ ಹೇರಳವಾಗಿದೆ. ಕಸಿ ಮಾವು ಜಾಸ್ತಿ ತಿಂದರೆ ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ಕಾಡು ಮಾವು ತಿಂದಷ್ಟೂ ಹಸಿವು ಜಾಸ್ತಿ. ಈಗೀಗ ಕಾಡುಮಾವಿನ ಸಂತತಿ ಕಡಿಮೆಯಾಗುತ್ತಿದೆ. ಈ ಮಾವಿನ ಗೊಜ್ಜು ಪಲ್ಯ ತಿಂದಾಗ, ಅದರ ಗೊರಟನ್ನು ಚೀಪಿದಾಗ ಆಗುವ ತೃಪ್ತಿ ಬೇರೆ ಮಾವಿನಲ್ಲಿ ಸಿಗದು. ಉಪ್ಪಿನಕಾಯಿಗೆ, ಮಾಂಬಳಕ್ಕೆ ಕಾಡು ಮಾವೇ ಸೂಕ್ತ. ಮುಂದಿನ ಪೀಳಿಗೆಗೆ ಕಾಡು ಮಾವಿನ ವಿಶೇಷತೆಯ ಅರಿವು ಮೂಡಿಸಬೇಕಿದೆ. ಆದಷ್ಟು ಮರ ಕಡಿಯದೆ ಅದರ ಸಂತತಿ ಉಳಿಸಲು ಪ್ರಯತ್ನಿಸೋಣ.

ಕಾಡು ಮಾವಿನ ಹಣ್ಣಿನ ಪಾಯಸ

ಬೇಕಾಗುವ ವಸ್ತುಗಳು: 5-6 ಕಾಡುಮಾವಿನ ಹಣ್ಣು, 4-5 ಅಚ್ಚುಬೆಲ್ಲ, 3 ಕಪ್ ತೆಂಗಿನ ತುರಿ, 2-3 ಚಮಚ ಅಕ್ಕಿ ಹಿಟ್ಟು, ಚಿಟಿಕಿ ಉಪ್ಪು.

ಮಾಡುವ ವಿಧಾನ: ಕಾಡುಮಾವಿನ ಹಣ್ಣಿನ ತೊಟ್ಟು ತೆಗೆದು, ತೊಳೆದು ಸುಲಿಯಿರಿ. ಗೊರಟಿನಿಂದ ರಸವನ್ನು ಕಿವುಚಿ ಹಿಂಡಿಕೊಳ್ಳಿ. ಕಾಯಿ ತುರಿದು ರುಬ್ಬಿ ದಪ್ಪ ಹಾಲು ಹಿಂಡಿ ಬೇರೆ ಇಡಿ. ಮತ್ತೆರಡು ಬಾರಿ ಹಿಂಡಿದ ಹಾಲನ್ನು ಮಾವಿನ ರಸಕ್ಕೆ ಬೆರೆಸಿ. ನಂತರ ಒಲೆಯ ಮೇಲಿಟ್ಟು ಉಪ್ಪು ಬೆಲ್ಲ ಹಾಕಿ ಕುದಿಸಿ. 5-10 ನಿಮಿಷ ಕುದಿದ ನಂತರ ಅಕ್ಕಿ ಹಿಟ್ಟು ನೀರಲ್ಲಿ ಕದಡಿ, ಪಾಯಸ ದಪ್ಪವಾಗುವುದಕ್ಕೆ ಬೇಕಾದಷ್ಟು ಅಕ್ಕಿ ಹಿಟ್ಟು ಪಾಯಸಕ್ಕೆ ಹಾಕಿ ಚೆನ್ನಾಗಿ ಕುದಿಸಿ. ಆಗಾಗ ಸೌಟಿನಿಂದ ಮೊಗಚುತ್ತಾ ಇರಬೇಕು. ನಂತರ ದಪ್ಪ ಹಾಲು ಹಾಕಿ ಒಂದು ಕುದಿ ಕುದಿಸಿ ಒಲೆಯಿಂದ ಇಳಿಸಿ. ಮಾವಿನಹಣ್ಣಿನ ಹುಳಿ ನೋಡಿಕೊಂಡು ಬೆಲ್ಲ ಹಾಕಬೇಕು. ಅಕ್ಕಿ ಹಿಟ್ಟಿನ ಬದಲು ಅಕ್ಕಿ ನೆನೆಸಿ ರುಬ್ಬಿಯೂ ಹಾಕಬಹುದು. ರುಚಿಯಾದ ಈ ಪಾಯಸ ತಿಂದಷ್ಟೂ ತಿನ್ನಬೇಕೆನಿಸುತ್ತದೆ.







ಕಾಡು ಮಾವಿನ ಹಣ್ಣಿನ ತೊಕ್ಕು


ಬೇಕಾಗುವ ವಸ್ತುಗಳು: 9-10 ಕಾಡು ಮಾವಿನ ಹಣ್ಣು, 2 ಚಮಚ ಕೆಂಪು ಮೆಣಸಿನ ಪುಡಿ, ರುಚಿಗೆ ಬೇಕಾದಷ್ಟು ಉಪ್ಪು

ಮಾಡುವ ವಿಧಾನ: ಕಾಡುಮಾವಿನ ಹಣ್ಣಿನ ತೊಟ್ಟು ತೆಗೆದು, ತೊಳೆದು, ಸುಲಿದು, ಕಿವುಚಿ, ದಪ್ಪ ತಳದ ಬಾಣಲೆಗೆ  ಹಿಂಡಿ. ಉಪ್ಪು ಮತ್ತು ಕೆಂಪುಮೆಣಸಿನ ಪುಡಿ ಸೇರಿಸಿ ಒಲೆಯ  ಮೇಲಿಟ್ಟು ಸಣ್ಣ ಉರಿಯಲ್ಲಿ ಬೇಯಿಸಿ. ಇದು ಬೇಯುತ್ತಿದ್ದಂತೆ ಗಟ್ಟಿಯಾಗುತ್ತಾ ಬರುವಾಗ ಒಲೆಯಿಂದ ಇಳಿಸಿ. 2-3 ತಿಂಗಳು ಇದು ಹಾಳಾಗದು. ಅನ್ನದ ಜೊತೆ ಹೆಚ್ಚಿದ ಈರುಳ್ಳಿ, ಎಣ್ಣೆ ಹಾಕಿ ತಿಂದರೆ ಇದು ಬಲು ರುಚಿ.











ಮಾವಿನ ಹಣ್ಣಿನ ಗಸಿ


ಬೇಕಾಗುವ ವಸ್ತುಗಳು: 7-8 ಕಾದುಮಾವಿನ ಹಣ್ಣು, 2 ಕಪ್ ತೆಂಗಿನ ತುರಿ, 5-6 ಹುರಿದ ಒಣಮೆಣಸು, 1 ಚಮಚ ಉದ್ದಿನಬೇಳೆ, 2 ಚಮಚ ಕೊತ್ತಂಬರಿ, 1/2 ಚಮಚ ಸಾಸಿವೆ, 4-5 ಚಮಚ ಬೆಲ್ಲ, 1 ಎಸಳು ಕರಿಬೇವಿನೆಲೆ, 2 ಚಮಚ ಎಣ್ಣೆ.


ಮಾಡುವ ವಿಧಾನ: ತೆಂಗಿನ ತುರಿ, ಹುರಿದ ಒಣಮೆಣಸು ಸೇರಿಸಿ, ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿ. ತೆಗೆಯುವ ಮೊದಲು ಕೊತ್ತಂಬರಿ, ಉದ್ದಿನಬೇಳೆ ಎಣ್ಣೆಯಲ್ಲಿ ಹುರಿದು ಅದಕ್ಕೆ ಹಾಕಿ ಎರಡು ಸುತ್ತು ರುಬ್ಬಿ. ಮಾವಿನ ಹಣ್ಣು ತೊಳೆದು, ಅದರ ತುದಿಭಾಗದಲ್ಲಿ ಗಾಯ ಮಾಡಿ, ಸ್ವಲ್ಪ ನೀರು, ಬೆಲ್ಲ ಸೇರಿಸಿ ಬೇಯಿಸಿ. ನಂತರ ರುಬ್ಬಿದ ಮಸಾಲೆ, ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಸಣ್ಣ ತುಂಡು ಕೆಂಪು ಮೆಣಸು ಹಾಕಿ ಒಗ್ಗರಣೆ ಕೊಡಿ. ಈ ಗಸಿ ಸಾಂಬಾರಿಗಿಂತ ತುಸು ದಪ್ಪಗಿರಬೇಕು. ಅನ್ನ ಚಪಾತಿ ಜೊತೆ ತಿನ್ನಲು ರುಚಿ. 

ಅಲಸಂಡೆ - COWPEA PODS

ಅಲಸಂಡೆಯ ರುಚಿಕರ ಅಡುಗೆಗಳು

ಅಲಸಂಡೆಯನ್ನು ಹಿತಮಿತವಾಗಿ ಸೇವಿಸುವುದರಿಂದ ದೇಹದ ಬಲ ಹೆಚ್ಚುವುದು. ಹಸಿ ಅಲಸಂಡೆಯನ್ನು ಬೇಯಿಸದೆ ತಿನ್ನುವುದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚುವುದು. ಆದರೆ ಮಿತವಾಗಿ ತಿನ್ನಬೇಕು.

ಎಳೆ ಅಲಸಂಡೆಕಾಯಿಯ ಚಟ್ನಿ



ಬೇಕಾಗುವ ವಸ್ತುಗಳು: ಎಳೆ ಅಲಸಂಡೆ 7-8, 3-4 ಹಸಿಮೆಣಸು, 1/2 ಕಪ್ ಕಾಯಿತುರಿ, 1 ಚಮಚ ಹುಳಿರಸ, 1 1/2 ಚಮಚ ಸಾಸಿವೆ, 1 1/2 ಚಮಚ ಜೀರಿಗೆ, 1/2 ಚಮಚ ಕಡಲೆಬೇಳೆ, 1/2 ಚಮಚ ಉದ್ದಿನಬೇಳೆ, 1 ಒಣಮೆಣಸು, ಚಿಟಿಕಿ ಇಂಗು, 2 ಚಮಚ ಎಣ್ಣೆ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ: ಅಲಸಂಡೆಕಾಯಿಯನ್ನು ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿ. ನಂತರ ತೆಂಗಿನತುರಿ, ಹುಳಿರಸ, 1/2 ಚಮಚ ಸಾಸಿವೆ,  ಹಸಿಮೆಣಸು, 1/2 ಚಮಚ ಜೀರಿಗೆ, ಇಂಗು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಒಣಮೆಣಸು ಸೇರಿಸಿ ಒಗ್ಗರಣೆ ಕೊಡಿ. ಈ ಚಟ್ನಿ ತುಂಬಾ ರುಚಿಕರವಾಗಿದ್ದು ಅನ್ನ ಚಪಾತಿ ಜೊತೆ ಸವಿಯಲು ಚೆನ್ನಾಗಿರುತ್ತದೆ.










ಎಳೆ ಅಲಸಂಡೆಕಾಯಿಯ ಚಿತ್ರಾನ್ನ


ಬೇಕಾಗುವ ವಸ್ತುಗಳು:  1/4 ಕಪ್ ಸಣ್ಣಗೆ ತುಂಡುಮಾಡಿದ  ಎಳೆ ಅಲಸಂಡೆಕಾಯಿ, 1 ಕಪ್ ಬೆಳ್ತಿಗೆ ಅನ್ನ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, 1/2 ಚಮಚ ಉದ್ದಿನಬೇಳೆ, 1/2 ಚಮಚ ಕಡಲೆಬೇಳೆ, 2-3 ಹಸಿಮೆಣಸು, 1 ಎಸಳು ಕರಿಬೇವು, 1/4 ಚಮಚ ಅರಸಿನ, 2 ಚಮಚ ತೆಂಗಿನತುರಿ, 1 ಚಮಚ ನೆಲಕಡಲೆಬೀಜ, 1 ಚಮಚ ಗೋಡಂಬಿ, 2 ಚಮಚ ನಿಂಬೆರಸ, 2 ಚಮಚ ಎಣ್ಣೆ, ಸ್ವಲ್ಪ ಕೊತ್ತಂಬರಿಸೊಪ್ಪು, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ: ಮೊದಲು ತುಂಡುಮಾಡಿದ ಅಲಸಂಡೆಗೆ ಸ್ವಲ್ಪ ನೀರು ಉಪ್ಪು ಹಾಕಿ ಬೇಯಿಸಿ. ನಂತರ ಬಾಣಲೆ ಒಲೆಯಮೇಲಿಟ್ಟು ಎಣ್ಣೆ ಹಾಕಿ ಬಿಸಿಯಾದಾಗ  ಅನುಕ್ರಮವಾಗಿ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು ಹಾಕಿ ಸ್ವಲ್ಪ ಹುರಿದು, ಉದ್ದಿನಬೇಳೆ, ಕಡಲೆಬೇಳೆ ಕೆಂಪಗಾದಾಗ, ಸೀಳೆದ ಹಸಿಮೆಣಸು, ಅರಸಿನ, ಹುರಿದ ನೆಲಕಡಲೆಬೀಜ, ಗೋಡಂಬಿ ಹಾಕಿ ಸ್ವಲ್ಪ ಹುರಿದು, ಬೇಯಿಸಿದ ಅನ್ನ, ತೆಂಗಿನ ತುರಿ ಹಾಕಿ ತೊಳಸಿ. ಸ್ವಲ್ಪವೇ ಉಪ್ಪು, ನಿಂಬೆರಸ ಹಾಕಿ ತೊಳಸಿ. ನಂತರ ಒಲೆಯಿಂದ ಕೆಳಗಿಳಿಸಿ. ಗೋಡಂಬಿ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಮಕ್ಕಳಿಗೆ ಈ ಚಿತ್ರಾನ್ನ ಇಷ್ಟವಾಗುತ್ತದೆ. 




ಅಲಸಂಡೆಕಾಯಿಯ ಮಸಾಲೆ ಪಲ್ಯ


ಬೇಕಾಗುವ ವಸ್ತುಗಳು:  1 ಕಪ್ ಸಣ್ಣಗೆ ತುಂಡುಮಾಡಿದ  ಹದವಾಗಿ ಬಲಿತ ಅಲಸಂಡೆಕಾಯಿ, 1/4 ಚಮಚ ಕೆಂಪುಮೆಣಸಿನ ಹುಡಿ, 1/4 ಚಮಚ ಅರಸಿನ, 2 ಚಮಚ ಬೆಲ್ಲ, 2 ಚಮಚ ಎಣ್ಣೆ, 2 ಕೆಂಪುಮೆಣಸು, 1/2 ಚಮಚ ಕೊತ್ತಂಬರಿ, 1 ಎಸಳು ಕರಿಬೇವಿನೆಲೆ, ರುಚಿಗೆ ತಕ್ಕ ಉಪ್ಪು, 1/2 ಕಪ್ ತೆಂಗಿನ ತುರಿ, 1/2 ಚಮಚ ಉದ್ದಿನಬೇಳೆ, 3/4 ಚಮಚ ಸಾಸಿವೆ
ಮಾಡುವ ವಿಧಾನ: ಮೊದಲು ತೆಂಗಿನತುರಿ, ಕೆಂಪುಮೆಣಸು, ಕೊತ್ತಂಬರಿ, ಚಿಟಿಕಿ ಸಾಸಿವೆ ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿ. ನಂತರ ಬಾಣಲೆ ಒಲೆಯಮೇಲಿಟ್ಟು ಎಣ್ಣೆಹಾಕಿ, ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ ಉದ್ದಿನಬೇಳೆ, ಕರಿಬೇವು ಹಾಕಿ ಸ್ವಲ್ಪ ಹುರಿದು, ನೀರು, ಕೆಂಪುಮೆಣಸಿನ ಹುಡಿ, ಅರಸಿನ, ಬೆಲ್ಲ, ಉಪ್ಪು ಹಾಕಿ ಬೇಯಿಸಿ. ನಂತರ ನೀರೆಲ್ಲಾ ಆರುತ್ತಾ ಬಂದಾಗ ರುಬ್ಬಿದ  ಮಸಾಲೆ ಹಾಕಿ ಸ್ವಲ್ಪ ಹೊತ್ತು ತೊಳಸಿ ಕೆಳಗಿಳಿಸಿ. ಈ ಪಲ್ಯ ಅನ್ನ, ಚಪಾತಿ, ಪರೋಟದ ಜೊತೆ ತಿನ್ನಲು ರುಚಿಕರ. ಈ ಪಲ್ಯ ಸ್ವಲ್ಪ ಸಿಹಿಯಾದರೆ ರುಚಿ ಜಾಸ್ತಿ. 


ತಂಬುಳಿ - BUTTERMILK RAW CURRY

ಬೇಸಿಗೆಯ ಆರೋಗ್ಯಕರ ತಂಬುಳಿಗಳು

ಬೇಸಿಗೆಯಲ್ಲಿ ಸಾಕಷ್ಟು ನೀರಿನ ಅಂಶವಿರುವ, ದೇಹಕ್ಕೆ ಪುಷ್ಠಿ ಕೊಡುವ ತಂಪಾದ ತಣ್ಣಗಿನ ಪದಾರ್ಥಗಳು ಊಟಕ್ಕೆ ಸೂಕ್ತ. ತಂಪಾದ ಪದಾರ್ಥ ಅಂದಕೂಡಲೇ ನೆನಪಾಗುವುದು ತಂಬುಳಿ. ತಂಬುಳಿ ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ. ಆರೋಗ್ಯಕರ ಔಷಧಿಯ ಗುಣಗಳಿಂದ ಕೂಡಿದ ಬೇಸಿಗೆಗೆ ಸೂಕ್ತವಾದ ಹಲವು ತಂಬುಳಿಗಳನ್ನು ಸುಲಭವಾಗಿ ಮಾಡಬಹುದು. 

ಸೋರೆಕಾಯಿ ತಿರುಳಿನ ತಂಬುಳಿ


ಬೇಕಾಗುವ ವಸ್ತುಗಳು: 1 ಕಪ್ ಸೋರೆಕಾಯಿ ತಿರುಳು, 1/2 ಕೆಂಪು ಮೆಣಸು, 1 ಚಮಚ ಜೀರಿಗೆ, 1 ಕಪ್ ಕಾಯಿತುರಿ, 2 ಕಪ್ ಸಿಹಿ ಮಜ್ಜಿಗೆ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, 1/2 ಚಮಚ ಎಣ್ಣೆ

ಮಾಡುವ ವಿಧಾನ: ಸೋರೆಕಾಯಿ ತಿರುಳು ಬೇಯಿಸಿ, ನಂತರ ಕೆಂಪುಮೆಣಸು, ಜೀರಿಗೆ, ಕಾಯಿತುರಿ ಸೇರಿಸಿ ರುಬ್ಬಿ. ನಂತರ ಬೇಕಾದಷ್ಟು ನೀರು ಸಿಹಿ ಮಜ್ಜಿಗೆ, ಉಪ್ಪು ಸೇರಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ ಮೊಸರು ಹಾಕಿ ಒಗ್ಗರಣೆ ಕೊಡಿ. ಈ ತಂಬುಳಿ ಯಕೃತ್ತಿಗೆ ಉತ್ತಮ. ರುಬ್ಬುವಾಗ ಕೆಂಪುಮೆಣಸಿನ ಬದಲು ಹಸಿಮೆಣಸು ಹಾಕಬಹುದು. ಆದರೆ ಹಸಿಮೆಣಸು ಎಣ್ಣೆಯಲ್ಲಿ ಎಸಿಡಿಟಿ ಉಂಟುಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ಕೆಂಪುಮೆಣಸು ಒಳ್ಳೆಯದು.









ಒಂದೆಲಗ ತಂಬುಳಿ


ಬೇಕಾಗುವ ವಸ್ತುಗಳು: 1 ಕಪ್ ಒಂದೆಲಗ, 1 ಕಪ್ ಕಾಯಿತುರಿ, 2 ಕಪ್ ಸಿಹಿ ಮಜ್ಜಿಗೆ, 5-6 ಕಾಳುಮೆಣಸು, 1/2 ಚಮಚ ಜೀರಿಗೆ, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, 1/2 ಚಮಚ ಎಣ್ಣೆ.

ಮಾಡುವ ವಿಧಾನ: ಕಾಳುಮೆಣಸು, ಜೀರಿಗೆ ಸ್ವಲ್ಪ ಎಣ್ಣೆ ಹಾಕಿ ಹುರಿದು, ತೊಳೆದು ಸ್ವಚ್ಛಗೊಳಿಸಿದ ಒಂದೆಲಗ ಸೊಪ್ಪು, ಕಾಯಿತುರಿ, ಹುರಿದ ಜೀರಿಗೆ, ಕಾಳುಮೆಣಸು, ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಮಜ್ಜಿಗೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಬೇಕಾದಷ್ಟು ನೀರು ಸೇರಿಸಿ ತೊಳಸಿ. ನಂತರ ಎಣ್ಣೆಯಲ್ಲಿ ಸಾಸಿವೆ ಮತ್ತು ಕೆಂಪು ಮೆಣಸು ಹಾಕಿ ಒಗ್ಗರಣೆ ಕೊಡಿ. ಈ ತಂಬುಳಿ ಸೇವನೆಯಿಂದ ರಕ್ತಶುದ್ಧಿಯಾಗುತ್ತದೆ. ನೆನಪಿನ ವೃದ್ಧಿಗೆ ಸಹಕಾರಿ, ಹೊಟ್ಟೆಉರಿ ನಾಯಿಕೆಮ್ಮು ಉಪಷಮನವಾಗುತ್ತದೆ.









ನೆಲ್ಲಿಕಾಯಿ ತಂಬುಳಿ


ಬೇಕಾಗುವ ವಸ್ತುಗಳು: 4-5 ನೆಲ್ಲಿಕಾಯಿ, 1/2 ಕಪ್ ತೆಂಗಿನ ತುರಿ, 2 ಕಪ್ ಸಿಹಿ ಮಜ್ಜಿಗೆ, 1/2 ಚಮಚ ಜೀರಿಗೆ, 1/2 ಕೆಂಪು ಮೆಣಸು, 1 ಹಸಿಮೆಣಸು, 1 ಕರಿಬೇವಿನೆಲೆ, 1/2 ಚಮಚ ಎಣ್ಣೆ ಯಾ ತುಪ್ಪ, ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ: ನೆಲ್ಲಿಕಾಯಿ ಜಜ್ಜಿ ಬೀಜ ತೆಗೆದು, ಕಾಯಿತುರಿ ಸೇರಿಸಿ, ಸ್ವಲ್ಪ ನೀರು ಹಾಕಿ, ಹಸಿಮೆಣಸು ಸೇರಿಸಿ, ನುಣ್ಣಗೆ ರುಬ್ಬಿ. ನಂತರ ಮಜ್ಜಿಗೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ತುಪ್ಪದಲ್ಲಿ ಜೀರಿಗೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಈ ತಂಬುಳಿ ಸೇವನೆಯಿಂದ ಅಜೀರ್ಣ ಭೇದಿ, ಬಾಯಿ ರುಚಿ ಇಲ್ಲದಿರುವಿಕೆ ಇತ್ಯಾದಿಗಳಿಗೆ ಪರಿಹಾರ ಸಿಗುತ್ತದೆ. 

ಸೀಮೆ ಬದನೆ - CHAYOTE

ಸೀಮೆಬದನೆಯ ರುಚಿಕರ ಅಡುಗೆಗಳು


ಸೀಮೆಬದನೆಕಾಯಿಯಲ್ಲಿ ವಿಟಾಮಿನ್ ಸಿ ಮತ್ತು ಅಮೈನೋ ಆಮ್ಲಗಳು ಹೇರಳವಾಗಿವೆ. ನಾರಿನಂಶದಿಂದ ಕೂಡಿರವ ಸೀಮೆಬದನೆ ಆರೋಗ್ಯಕ್ಕೆ ಒಳ್ಳೆಯದು.

ಸೀಮೆಬದನೆ ಚಟ್ನಿ  



ಬೇಕಾಗುವ ವಸ್ತುಗಳು: 1 ಸೀಮೆಬದನೆ, 2-3 ಹಸಿಮೆಣಸು, 3 ಚಮಚ ಉದ್ದಿನಬೇಳೆ, 1/2 ಚಮಚ ಮೆಂತೆ, 1 ಚಮಚ ಹುಳಿರಸ, ಉಪ್ಪು ರುಚಿಗೆ ತಕ್ಕಷ್ಟು, 2 ಚಮಚ ಎಣ್ಣೆ

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಉದ್ದಿನಬೇಳೆ, ಮೆಂತೆ ಹುರಿಯಿರಿ. ನಂತರ ಸೀಮೆಬದನೆ ಸಣ್ಣಗೆ ತುಂಡುಮಾಡಿ ಹುಳಿ ಉಪ್ಪು ಹಾಕಿ ಬೇಯಿಸಿ. ನಂತರ ಹುರಿದ ಉದ್ದಿನಬೇಳೆ, ಮೆಂತೆ, ಬೆಂದ ಸೀಮೆಬದನೆ ಸೇರಿಸಿ ಸೇರಿಸಿ ರುಬ್ಬಿ. ಸಾಸಿವೆ, ಉದ್ದಿನಬೇಳೆ ಒಗ್ಗರಣೆ ಕೊಡಿ. ತೆಂಗಿನಕಾಯಿ ಹಾಕದೆ ಮಾಡುವ ಈ ಚಟ್ನಿ, ರಾಗಿಮುದ್ದೆಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ. ತೆಂಗಿನತುರಿ ಬೇಕಾದರೆ ಸ್ವಲ್ಪ ಸೇರಿಸಬಹುದು.





ಸೀಮೆಬದನೆ ರೊಟ್ಟಿ



ಬೇಕಾಗುವ ವಸ್ತುಗಳು:1 ಕಪ್ ಸೀಮೆಬದನೆ ತುರಿ, 1 ಕಪ್ ಅಕ್ಕಿಹಿಟ್ಟು, 1/2 ಕಪ್ ತೆಂಗಿನ ತುರಿ, 1 ಚಮಚ ಜೀರಿಗೆ, 1-2 ಹಸಿಮೆಣಸು, 1/4 ಕಪ್ ಕ್ಯಾರೆಟ್ ತುರಿ, ಉಪ್ಪು ರುಚಿಗೆ ತಕ್ಕಷ್ಟು, ಸ್ವಲ್ಪ ಕರಿಬೇವಿನೆಲೆಯ ಚೂರು, 1/4 ಕಪ್ ಮೊಸರು, 2 ಚಮಚ ಎಣ್ಣೆ

ಮಾಡುವ ವಿಧಾನ: ಸೀಮೆಬದನೆ ತುರಿ, ಅಕ್ಕಿ ಹಿಟ್ಟು, ತೆಂಗಿನ ತುರಿ, ಜೀರಿಗೆ, ಹಸಿಮೆಣಸು ಚೂರು, ಕ್ಯಾರೆಟ್ ತುರಿ, ಕರಿಬೇವಿನೆಲೆಯ ಚೂರು, ಉಪ್ಪು, ನೊಸರು, ಸ್ವಲ್ಪ ನೀರು ಎಲ್ಲವನ್ನೂ ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಉಂಡೆಮಾಡಿ, ಬಾಳೆಲೆ ಯಾ ಪ್ಲಾಸ್ಟಿಕ್ ಹಾಳೆಗೆ ಎಣ್ಣೆಪಸೆ ಮಾಡಿ ತೆಳುವಾದ ರೊಟ್ಟಿ ತಟ್ಟಿ ಕಾದ ತವಾದ ಮೇಲೆ ಹಾಕಿ 2 ಬದಿ ಕೆಂಪಗೆ ಬೇಯಿಸಿ ತೆಗೆಯಿರಿ. ಇದನ್ನು ಸೀಮೆಬದನೆ ಚಟ್ನಿ ಮತ್ತು ತುಪ್ಪದೊಂದೆಗೆ ಸವಿಯಿರಿ.





ಸೀಮೆಬದನೆ ಹೆಸರುಕಾಳು ಪಲ್ಯ



ಬೇಕಾಗುವ ವಸ್ತುಗಳು: 1 ಕಪ್ ಸಿಪ್ಪೆ ಮತ್ತು ತಿರುಳು ತೆಗೆದು ಸಣ್ಣಗೆ ಹೆಚ್ಚಿದ ಸೀಮೆಬದನೆ, 1/2 ಕಪ್ ಹೆಸರುಕಾಳು, 1 ಹಸಿಮೆಣಸು, 1/2 ಚಮಚ ಕೆಂಪುಮೆಣಸಿನ ಪುಡಿ, 1/4 ಕಪ್ ಕಾಯಿತುರಿ, ಚಿಟಿಕಿ ಅರಸಿನ ಪುಡಿ, 1/2 ಚಮಚ ಸಾಸಿವೆ, 1 ಚಮಚ ಉದ್ದಿನಬೇಳೆ, 2 ಚಮಚ ಎಣ್ಣೆ,  ರುಚಿಗೆ ತಕ್ಕ ಉಪ್ಪು, ಸ್ವಲ್ಪ ಕರಿಬೇವಿನೆಲೆ, 1/2 ಚಮಚ ಬೆಲ್ಲ

ಮಾಡುವ ವಿಧಾನ: ಹೆಸರುಕಾಳು ಬೇಯಿಸಿ. ನಂತರ ಬಾಣಲೆ ಒಲೆಯ ಮೇಲೆಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ. ಉದ್ದಿನಬೇಳೆ ಕೆಂಪಗಾದಾಗ ಸಣ್ಣಗೆ ಹೆಚ್ಚಿದ ಸೀಮೆಬದನೆ, ಹಸಿಮೆಣಸು ಚೂರು, ಕೆಂಪುಮೆಣಸಿನ ಪುಡಿ, ಅರಸಿನ ಪುಡಿ, ಬೆಲ್ಲ ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಬೆಂದ ಹೆಸರುಕಾಳು, ಉಪ್ಪು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿಟ್ಟು ತೊಳಸಿ. ನಂತರ ಇಳಿಸಿ ತೆಂಗಿನತುರಿಹಾಕಿ ತೊಳಸಿ. ಈಗ ರುಚಿಯಾದ ಪಲ್ಯವನ್ನು ಅನ್ನ, ಚಪಾತಿಯೊಂದಿಗೆ ಸವಿಯಿರಿ.

ದಾಳಿಂಬೆ - Pomegrenate

ದಾಳಿಂಬೆ ಹಣ್ಣಿನ ಪೌಷ್ಠಿಕ ಅಡುಗೆಗಳು

ದೈಹಿಕ ಶಕ್ತಿ ಮತ್ತು ಪುಷ್ಠಿಗಾಗಿ, ಮೂರ್ಛೆ ಮತ್ತು ಕೆಮ್ಮನ್ನು ದೂರವಿಡಲು ದಾಳಿಂಬೆ ಹಣ್ಣನ್ನು ನಿಯಮಿತವಾಗಿ ತಿನ್ನಬೇಕು. ಜಠರದಲ್ಲಿ ಉರಿ, ಮೂತ್ರವಿಸರ್ಜನೆಯಲ್ಲಿ ಅಡೆತಡೆ,  ವೇದನೆ, ದಾಹ, ಉಷ್ಣದ ಕಾರಣದಿಂದ ನೇತ್ರಗಳಲ್ಲಿ ಉರಿ, ಗಂಟಲು ಕೆರೆತ, ಮತ್ತು ಹೃದಯದಲ್ಲಿ ಕಸಿವಿಸಿಯುಂಟಾದಾಗ ದಾಳಿಂಬೆ ಶರಬತ್ತು ಮಾಡಿ ಕುಡಿದರೆ  ಒಳ್ಳೆಯದು.

ದಾಳಿಂಬೆ ಅನ್ನ


ಬೇಕಾಗುವ ವಸ್ತುಗಳು: 1 ಕಪ್ ದಾಳಿಂಬೆ ಬೀಜ, 1/2 ಕಪ್ ತೆಂಗಿನ ತುರಿ, 1 ಚಮಚ ಉದ್ದಿನಬೇಳೆ, 1 ಚಮಚ ಕಡಲೆಬೇಳೆ, 1/2 ಚಮಚ ಸಾಸಿವೆ, 1 ಈರುಳ್ಳಿ, 2 ಹಸಿಮೆಣಸು, 1 ಒಣಮೆಣಸು, ಉಪ್ಪು ರುಚಿಗೆ ತಕ್ಕಷ್ಟು, 1 ಎಸಳು ಕರಿಬೇವು, 1 ಕಪ್ ಬೆಳ್ತಿಗೆ ಅನ್ನ, 7-8 ಹುರಿದ ಗೋಡಂಬಿ, 2 ಚಮಚ ಕೊತ್ತಂಬರಿ ಸೊಪ್ಪು, 2-3 ಚಮಚ ಎಣ್ಣೆ

ಮಾಡುವ ವಿಧಾನ: ದಾಳಿಂಬೆ ಬೀಜ ಮತ್ತು ತೆಂಗಿನ ತುರಿ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ, ಬಿಸಿಯಾದಾಗ ಗೋಡಂಬಿ ಹಾಕಿ ಹುರಿದು ತೆಗೆಯಿರಿ. ನಂತರ ಅನುಕ್ರಮವಾಗಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಈರುಳ್ಳಿ ಹಾಕಿ ಕೆಂಪಗೆ ಹುರಿದು, ಕರಿಬೇವು, ಹಸಿಮೆಣಸು, ಒಣಮೆಣಸು, ಹಾಕಿ ಹುರಿದು, ಮಾಡಿಟ್ಟ ಅನ್ನ ಹಾಕಿ ತೊಳಸಿ ಬೇರೆ ಬಾಣಲೆಗೆ 1 ಚಮಚ ಎಣ್ಣೆ ಹಾಕಿ ರುಬ್ಬಿದ ದಾಳಿಂಬೆ ತೆಂಗಿನ ಮಿಶ್ರಣ ಹಾಕಿ. ಒಗ್ಗರಣೆ ಹಾಕಿದ ಅನ್ನ ಉಪ್ಪು ಹಾಕಿ ತೊಳಸಿ. ಸಣ್ಣ ಉರಿಯಲ್ಲಿ 5 ನಿಮಿಷ ಇಡಿ. ನಂತರ ಹುರಿದ ಗೋಡಂಬಿ ಮತ್ತು ಕೊತ್ತಂಬರಿಸೊಪ್ಪು ಹಾಕಿ ಕೆಳಗಿಳಿಸಿ. ಸವಿದು ಆನಂದಿಸಿ.




ದಾಳಿಂಬೆ ಹಣ್ಣಿನ ಗೊಜ್ಜು


ಬೇಕಾಗುವ ವಸ್ತುಗಳು: 1 ಕಪ್ ದಾಳಿಂಬೆ ಹಣ್ಣಿನ ಬೀಜ, 2 ಚಮಚ ಉದ್ದಿನಬೇಳೆ, 3-4 ಒಣಮೆಣಸು, 1 ಕಪ್ ತೆಂಗಿನ ತುರಿ, 3 ಚಮಚ ಎಣ್ಣೆ, 1 ಚಮಚ ಸಾಸಿವೆ, 1/2 ಚಮಚ ಜೀರಿಗೆ, 1 ಎಸಳು ಕರಿಬೇವಿನೆಲೆ, 1 ಟೊಮೆಟೊ, 1 ಚಮಚ ಹುಳಿರಸ, 1 ಚಮಚ ಬೆಲ್ಲ, ರುಚಿಗೆ ತಕ್ಕ ಉಪ್ಪು.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದಾಗ, ಉದ್ದಿನಬೇಳೆ, ಕೆಂಪುಮೆಣಸು ಹಾಕಿ ಹುರಿದು ಕೆಳಗಿಳಿಸಿ. ನಂತರ ತೆಂಗಿನತುರಿ, ಗುರಿದ ಮಸಾಲೆ ಹಾಕಿ ರುಬ್ಬಿ. ನಂತರ ಸ್ವಲ್ಪ ತೆಂಗಿನ ತುರಿ, ದಾಳಿಂಬೆ ಹಣ್ಣಿನ ಬೀಜ ಹಾಕಿ (ಪ್ರತ್ಯೇಕವಾಗಿ ರುಬ್ಬಿ) ನಂತರ ಬಾಣಲೆ ಒಲೆಯಮೇಲಿಟ್ಟು ಎಭ್ಭೆ ಹಾಕಿ. ಬೆಸಿಯಾದಾಗ ಅನುಕ್ರಮವಾಗಿ ಸಾಸಿವೆ, ಜೀರಿಗೆ, ಕರಿಬೇವು, ಟೊಮೆಟೊ ಚೂರು ಹಾಕಿ ಸ್ವಲ್ಪ ಹುರಿದು ರುಬ್ಬಿದ ತೆಂಗಿನ ಮಿಶ್ರಣ ಹಾಕಿ ಹಸಿವಾಸನೆ ಹೋಗುವ ತನಕ ಹುರಿದು, ದಾಳಿಂಬೆ ರುಬ್ಬಿದ ಮಿಶ್ರಣ ಹಾಕಿ. ಹುಳಿರಸ, ಬೆಲ್ಲ, ಉಪ್ಪು ಹಾಕಿ ಒಂದು ಕುದಿ ಕುದಿಸಿ, ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿ. ಈ ಗೊಜ್ಜು ಚಪಾತಿ, ಪೂರಿ, ರೊಟ್ಟಿ ಜೊತೆ ತಿನ್ನಲು ರುಚಿ.





ದಾಳಿಂಬೆ ಹಣ್ಣಿನ ಮೊಸರು ಗೊಜ್ಜು


ಬೇಕಾಗುವ ವಸ್ತುಗಳು: 1 ಕಪ್ ದಾಳಿಂಬೆ ಹಣ್ಣಿನ ಬೀಜ, 1 ಕಪ್ ಸಿಹಿ ಮೊಸರು, 1 ಕಪ್ ಕಾಯಿತುರಿ, 1 ಚಮಚ ಜೀರಿಗೆ, 1 ಚಮಚ ಸಾಸಿವೆ, 1/2 ಚಮಚ ಕರಿಮೆಣಸು, 1/2 ಚಮಚ ಸಕ್ಕರೆ, 1 ಚಮಚ ಒಣಮೆಣಸು, 1 ಚಮಚ ತುಪ್ಪ, ರುಚಿಗೆ ತಕ್ಕ ಉಪ್ಪು.

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು 1/2 ಚಮಚ ತುಪ್ಪ ಹಾಕಿ ಸ್ವಲ್ಪ ಹುರಿದು ಕೆಳಗಿಳಿಸಿ. ನಂತರ ಉಪ್ಪು, ಸಕ್ಕರೆ, ಹುರಿದ ಕಾಯಿತುರಿ, ಜೀರಿಗೆ, ಕರಿಮೆಣಸು, ಮಿಕ್ಸಿಗೆ ಹಾಕಿ ನಣ್ಣಗೆ ರುಬ್ಬಿ. ದಾಳಿಂಬೆ ಬೀಜ, ಸಿಹಿ ಮೊಸರು, ರುಬ್ಬಿದ ಮಿಶ್ರಣ ಎಲ್ಲಾ ಬೆರೆಸಿ ಸರಿಯಾಗಿ ಕಲಸಿ. ನಂತರ ತುಪ್ಪದಲ್ಲಿ ಸಾಸಿವೆ ಮತ್ತು ಒಣಮೆಣಸು ಹಾಕಿ ಒಗ್ಗರಣೆ ಕೊಡಿ. ರುಚಿಯಾದ ಮೊಸರು ಗೊಜ್ಜನ್ನು ಅನ್ನದೊಂದಿಗೆ ಸವಿಯಿರಿ.

ಪಪ್ಪಾಯಿ - PAPAYA

ಪಪ್ಪಾಯಿಯ ಆರೋಗ್ಯಕರ ಅಡುಗೆಗಳು

ಪಪ್ಪಾಯಿಯಲ್ಲಿ ಮನುಷ್ಯನ ದೇಹಕ್ಕೆ ಉಪಯೋಗವಾಗುವಂಥ ಎಂಝೈಮುಗಳು ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ದೇಹದ ಅವಯವಗಳ ಮೇಲೆ ಮತ್ತು ಪಚನಕ್ರಿಯೆಯ ಮೇಲೆ ಒತ್ತಡ ಕಡಿಮೆಯಾಗಿ ಜೀರ್ಣಶಕ್ತಿ ಹೆಚ್ಚುತ್ತದೆ.

ಪಪ್ಪಾಯಿ ಬಾಜಿ 



ಬೇಕಾಗುವ ವಸ್ತುಗಳು: 1 ಕಪ್ ಹದ ಹಣ್ಣಾದ ಪಪ್ಪಾಯಿ ತುಂಡುಗಳು, 2 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1 ಎಸಳು ಕರಿಬೇವು, 1/2 ಕಪ್ ಈರುಳ್ಳಿ ಚೂರು, 2 ಹಸಿಮೆಣಸು, 1 ಒಣಮೆಣಸು, ಚಿಟಿಕಿ ಕಾಳುಮೆಣಸಿನ ಪುಡಿ, 1/4 ಚಮಚ ಅರಸಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 2 ಚಮಚ ತೆಂಗಿನ ತುರಿ, ರುಚಿಗೆ ತಕ್ಕ ಉಪ್ಪು.

ಮಾಡುವ ವಿಧಾನ: ಪಪ್ಪಾಯಿ ಸಿಪ್ಪೆ-ಬೀಜ ತೆಗೆದು ಸಣ್ಣಗೆ ತುಂಡುಮಾಡಿ ಬೇಯಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಕರಿಬೇವು ಈರುಳ್ಳಿ ಚೂರು ಹಾಕಿ ಸ್ವಲ್ಪ ಹುರಿದು, ಹಸಿಮೆಣಸು ಚೂರು, ಒಣಮೆಣಸು, ಕಾಳುಮೆಣಸಿನ ಪುಡಿ, ಅರಸಿನ ಪುಡಿ ಹಾಕಿ ತೊಳಸಿ. ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಹಾಕಿ ಸರಿಯಾಗಿ ತೊಳಸಿ. ಉಪ್ಪು ಹಾಕಿ ಬೆರೆಸಿ. ನಂತರ ಬೌಲ್ ಗೆ ಹಾಕಿ, ಅನ್ನ ಚಪಾತಿಯೊಂದಿಗೆ ತಿನ್ನಲು ಬಲುರುಚಿ.





ಪಪ್ಪಾಯಿ ದೋಸೆ



ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 3/4 ಕಪ್ ಪಪ್ಪಾಯಿ ಹಣ್ಣಿನ ತುಂಡುಗಳು, 2 ಚಮಚ ಬೆಲ್ಲ, ರುಚಿಗೆ ತಕ್ಕ ಉಪ್ಪು, 2 ಚಮಚ ಎಣ್ಣೆ.
ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು 2-3 ಗಂಟೆ ನೆನೆಸಿ. ಪಪ್ಪಾಯಿ ಹಣ್ಣಿನ ಹೋಳುಗಳನ್ನು ಬೆಲ್ಲದೊಂದಿಗೆ ಸೇರಿಸಿ ಸ್ವಲ್ಪ ಬಿಸಿ ಮಾಡಿ. ನಂತರ ನೆನೆಸಿದ ಅಕ್ಕಿ ತೊಳೆದು, ಹಣ್ಣಿನ ಜೊತೆ ಸೇರಿಸಿ ರುಬ್ಬಿ. ಉಪ್ಪು ಸೇರಿಸಿ. ನಂತರ ಕಾವಲಿ ಒಲೆಯ ಮೇಲಿಟ್ಟು, ಬಿಸಿಯಾದ ಮೇಲೆ ಸೋಸೆ ಹುಯಿದು, ಎಣ್ಣೆ ಹಾಕಿ ಎರಡೂ ಬದಿ ಕೆಂಪಗೆ ಬೇಯಿಸಿ. ನಂತರ ತುಪ್ಪ ಹಾಕಿ ತಿಂದರೆ ಪೌಷ್ಠಿಕ ದೋಸೆ ಸವಿಯಲು ರುಚಿಯಾಗಿರುತ್ತದೆ.







ಪಪ್ಪಾಯಿ ಕ್ಷೀರ



ಬೇಕಾಗುವ ವಸ್ತುಗಳು: 1 ಕಪ್ ಪಪ್ಪಾಯಿ ಹಣ್ಣಿನ ತಿರುಳು, 1 ಕಪ್ ರವೆ, 1 ಕಪ್ ಸಕ್ಕರೆ, 1/4 ಕಪ್ ತುಪ್ಪ, ಚಿಟಿಕಿ ಏಲಕ್ಕಿ ಪುಡಿ, 7-8 ಗೋಡಂಬಿ, 8-9 ಒಣದ್ರಾಕ್ಷೆ, 1 ಕಪ್ ಹಾಲು.
ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು 2 ಚಮಚ ತುಪ್ಪ ಹಾಕಿ. ಬಿಸಿಯಾದಾಗ ರವೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ 1 ಕಪ್ ಹಾಲು, 1 ಕಪ್ ನೀರು ಹಾಕಿ ಚೆನ್ನಾಗಿ ಬೇಯಿಸಿ. ಬೆಂದ ರವೆಗೆ ಪಪ್ಪಾಯಿ ಹಣ್ಣಿನ ತಿರುಳು ಬೆರೆಸಿ. ನಂತರ ಸಕ್ಕರೆ ಹಾಗೂ ಉಳಿದ ತುಪ್ಪ ಹಾಕಿ. ಹದ  ಉರಿಯಲ್ಲಿ ನಿಧಾನವಾಗಿ ತೊಳಸಿ. ಮಿಶ್ರಣ ಬಾಣಲೆಯಿಂದ ತಳ ಬಿಡುತ್ತಾ ಬಂದಾಗ, ಏಲಕ್ಕಿ ಪುಡಿ ಸೇರಿಸಿ ಒಲೆಯಿಂದ ಕೆಳಗಿಳಿಸಿ. ಗೋಡಂಬಿ ದ್ರಾಕ್ಷೆಯಿಂದ ಅಲಂಕರಿಸಿ ಸವಿಯಲು ಕೊಡಿ.