ಸಿಹಿ ಜೋಳ - Sweet Corn

Sweet Corn - ಸಿಹಿ ಜೋಳ


ಸಿಹಿ ಜೋಳದಲ್ಲಿ, ಮುಸುಕಿನ ಜೋಳದಲ್ಲಿರುವ ಎಲ್ಲಾ ಪೌಷ್ಠಿಕಾಂಶಗಳಿವೆ. ತಿನ್ನಲು ರುಚಿಯಾಗಿರುವ ಈ ಜೋಳದಿಂದ ಹಲವು ಬಗೆಯ ಪೌಷ್ಠಿಕ ಸ್ವಾದಿಷ್ಟ ಅಡುಗೆಗಳನ್ನು ಮಾಡಬಹುದು.

ಸಿಹಿ ಜೋಳದ ಪಾಯಸ


ಬೇಕಾಗುವ ವಸ್ತುಗಳು: 1 ಕಪ್ ಸಿಹಿ ಜೋಳ, 1/2 ಕಪ್ ಬೆಲ್ಲ ಯಾ ಸಕ್ಕರೆ, 2-3 ಏಲಕ್ಕಿ, ಒಂದು ಟೀ ಚಮಚ ಅಕ್ಕಿ ಹಿಟ್ಟು, 1 ಕಪ್ ತೆಂಗಿನ ತುರಿ, ಚಿಟಿಕಿ ಉಪ್ಪು

ಮಾಡುವ ವಿಧಾನ: ತೆಂಗಿನ ತುರಿ ತರಿತರಿಯಾಗಿ ರುಬ್ಬಿ, ದಪ್ಪ ಹಾಲು ತೆಗೆದು ಪ್ರತ್ಯೇಕ ಇಡಿ. ನಂತರ ಪುನಹ ಸ್ವಲ್ಪ ನೀರು ಸೇರಿಸಿ ರುಬ್ಬಿ, ನೀರು ಹಾಲು ತೆಗೆದಿರಿಸಿ. ಸಿಹಿ ಜೋಳ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ನೀರು ಹಾಲು, ಚಿಟಿಕಿ ಉಪ್ಪು ಹಾಕಿ ಕುದಿಸಿ. 5 ನಿಮಿಷ ಕುದಿದ ನಂತರ  ಬೆಲ್ಲ ಹಾಕಿ. ಬೆಲ್ಲ ಕರಗಿದಾಗ ಅಕ್ಕಿ ಹಿಟ್ಟು ನೀರಿನಲ್ಲಿ ಕರಗಿಸಿ ಹಾಕಿ. ಕುದಿಯಲು ಆರಂಭವಾದಾಗ ದಪ್ಪ ಹಾಲು ಮತ್ತು ಏಲಕ್ಕಿ ಪುಡಿ ಹಾಕಿ ಬೆರೆಸಿ, ಒಲೆಯಿಂದ ಕೆಳಗಿಳಿಸಿ. ಈಗ ರುಚಿಯಾದ ಪೌಷ್ಠಿಕ ಜೋಳದ ಪಾಯಸ ಸವಿಯಲು ಸಿದ್ಧ.






ಸಿಹಿ ಜೋಳದ ಉಪ್ಪಿಟ್ಟು


ಬೇಕಾಗುವ ವಸ್ತುಗಳು: 1ಕಪ್ ಉಪ್ಪಿಟ್ಟು ರವೆ, 1 ಕಪ್ ಸಿಹಿ ಜೋಳ, 2-3 ಹಸಿಮೆಣಸು, 1/4 ಕಪ್ ಕ್ಯಾರೆಟ್, 1/4 ಕಪ್ ತುಪ್ಪ, 1 ಟೀ ಚಮಚ ಸಾಸಿವೆ, 1 ಟೀ ಚಮಚ ಉದ್ದಿನ ಬೇಳೆ, 1 ಟೀ ಚಮಚ ಜೀರಿಗೆ, 2 ಕಪ್ ನೀರು, 1/4 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ, 1/2 ಕಪ್ ನಿಂಬೆಹಣ್ಣು, 1/2" ಉದ್ದದ ಶುಂಠಿ, 1 ಎಸಳು ಕರಿಬೇವಿನೆಲೆ, ರುಚಿಗೆ ಉಪ್ಪು, ಒಣಮೆಣಸು 1.

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು 2 ಚಮಚ ತುಪ್ಪ ಹಾಕಿ. ಬಿಸಿಯಾದಾಗ ರವೆ ಹಾಕಿ ಸ್ವಲ್ಪ ಪರಿಮಳ ಬರುವವರೆಗೆ ಹುರಿದು ಕೆಳಗಿಳಿಸಿ. ನಂತರ ಬಾಣಲೆಗೆ ಪುನಹ ತುಪ್ಪ ಹಾಕಿ ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ, ಉದ್ದಿನಬೇಳೆ, ಜೀರಿಗೆ, ಒಣಮೆಣಸು ಹಾಕಿ. ಇವು ಕಾದು ಸಿಡಿದಾಗ ಕರಿಬೇವು ಮತ್ತು ಈರುಳ್ಳಿ ಚೂರು ಹಾಕಿ, ನೀರು ಸೇರಿಸಿ. ಮಿಶ್ರಣ ಕುದಿಯಲು ಆರಂಭವಾದಾಗ ಹುರಿದ ರವೆ ಹಾಕಿ ತಿರುಗಿಸಿ. ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ. 5 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಮುಚ್ಚಿಡಿ. ಬೆಂದ ಮೇಲೆ ಒಲೆಯಿಂದ ಕೆಳಗಿಳಿಸಿ, ನಿಂಬೆರಸ ಬೆರೆಸಿ ಮಿಶ್ರ ಮಾಡಿ. ಈಗ ಘಮಘಮಿಸುವ ಸಿಹಿ ಜೋಳದ ಉಪ್ಪಿಟ್ಟು ಸಿದ್ಧ.





ಸಿಹಿ ಜೋಳದ ಹಲ್ವಾ



ಬೇಕಾಗುವ ವಸ್ತುಗಳು: 1 ಕಪ್ ಸಿಹಿ ಜೋಳ, 1/2 ಕಪ್ ಸಕ್ಕರೆ, 1/4 ಕಪ್ ತುಪ್ಪ, ಗೋಡಂಬಿ 7-8, ದ್ರಾಕ್ಷಿ 8-9, 1 ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ: ಸಿಹಿ ಜೋಳ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ರುಬ್ಬಿದ ಜೋಳದ ಮಿಶ್ರಣ ಹಾಕಿ, ಸಕ್ಕರೆ ಹಾಕಿ ತಿರುಗಿಸಿ. ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ತುಪ್ಪ ಸೇರಿಸಿ ತಿರುಗಿಸುತ್ತಿರಿ. ತುಪ್ಪವೆಲ್ಲಾ ಬೇರ್ಪಟ್ಟು ಹಲ್ವಾದಿಂದ ಹೊರಬರುವಾಗ ಏಲಕ್ಕಿ ಪುಡಿ ಹಾಕಿ. ನಂತರ ಬೇಕಾದ ಆಕೃತಿಗೆ ಗೆರೆ ಎಳೆದು ತುಂಡು ಮಾಡಿ, ಗೋಡಂಬಿ ದ್ರಾಕ್ಷಿಯಿಂದ ಅಲಂಕರಿಸಿ ಸವಿಯಲು ನೀಡಿ.