ಕಾನಕಲ್ಲಟೆ - Cayratia mollissima

ಕಾನಕಲ್ಲಟೆ ಕಾಯಿಯ ರುಚಿಕರ ಅಡುಗೆಗಳು


ಕಾನಕಲ್ಲಟೆ ಕಾಯಿ ನಮ್ಮೂರಿನ ವಿಶಿಷ್ಟ ತರಕಾರಿ. ಮೊದಲು ಕಾಡಿನಲ್ಲಿ ಬೆಳೆಯುತ್ತಿದ್ದ ಈ ತರಕಾರಿಯನ್ನು ಮನೆಯ ಹಿತ್ತಲಲ್ಲಿಯೂ ಬೆಳೆಸುತ್ತಾರೆ. ನೀರಿನ ಅನುಕೂಲವಿದ್ದರೆ ವರ್ಷವಿಡೀ ಈ ತರಕಾರಿ ಬೆಳೆಯುತ್ತದೆ. ಗೊಂಚಲು ಗೊಂಚಲಾಗಿ ಬಳ್ಳಿಯಲ್ಲಿ ಬೆಳೆಯುವ ಈ ತರಕಾರಿಯಲ್ಲಿ ಔಷಧೀಯ ಗುಣಗಳಿವೆ. ಈಗಿನ ಯುವಪೀಳಿಗೆಯ ಜನರಿಗೆ ಈ ತರಕಾರಿಯ ಪರಿಚಯವಿರದು. ಮಕ್ಕಳ ಅಜೀರ್ಣ, ಅತಿಸಾರ, ಬೆಳವಣಿಗೆ ಕೊರತೆ, ಕಫದೋಷಗಳಲ್ಲಿ ಒಳ್ಳೆಯದು. ಆಗಾಗ ಬರುವ ಜ್ವರಕ್ಕೂ ಹಿತ. ಈ ಕಾಯಿಯಿಂದ ಸಾಸಿವೆ, ಸಾಂಬಾರು, ಮೆಣಸುಕಾಯಿ ಮಾಡಬಹುದು. ಅದರಲ್ಲೂ ಸೌತೆ ಸೇರಿಸಿ ಮಾಡುವ ಮಜ್ಜಿಗೆ ಹುಳಿಯ ರುಚಿಯಂತೂ ಬಹಳ ಸ್ವಾದಿಷ್ಟವಾಗಿರುತ್ತದೆ.









ಕಾನಕಲ್ಲಟೆ ಕಾಯಿಯ ಮೆಣಸುಕಾಯಿ 




ಬೇಕಾಗುವ ವಸ್ತುಗಳು: 15-20 ಕಾನಕಲ್ಲಟೆ ಕಾಯಿ, ಒಂದುವರೆ ಕಪ್ ತೆಂಗಿನ ತುರಿ, ಸಣ್ಣ ತುಂಡು ಬೆಲ್ಲ, ಸಣ್ಣ ತುಂಡು ಹುಳಿ, 1 ಚಮಚ ಎಳ್ಳು, 1 ಹಸಿಮೆಣಸು, 2 ಒಣಮೆಣಸು, 1/2 ಚಮಚ ಸಾಸಿವೆ, 1 ಚಮಚ ಎಣ್ಣೆ, 1 ಎಸಳು ಕರಿಬೇವಿನೆಲೆ, ರುಚಿಗೆ ತಕ್ಕ ಉಪ್ಪು.

ಮಾಡುವ ವಿಧಾನ: ಕಾನಕಲ್ಲಟೆ ಕಾಯಿಯನ್ನು ಅಡ್ಡಕ್ಕೆ ಕತ್ತರಿಸಿ, ಒಲೆಯ ಮೇಲೆ ಒಂದು ಪಾತ್ರೆಯಿಟ್ಟು ಸ್ವಲ್ಪ ನೀರು ಹಾಕಿ ತುಂಡು ಮಾಡಿದ ಕಾನಕಲ್ಲಟೆ ಕಾಯಿ ಹಾಕಿ 1 ಕುದಿ ಕುದಿಸಿ ಇಳಿಸಿ. ನಂತರ ಕಾಯಿಯನ್ನು ಕೈಯಲ್ಲಿ ಹಿಸುಕಿ ಒಂದೇ ಒಂದು ಬೀಜ ಉಳಿಯದಂತೆ ಸಂಪೂರ್ಣವಾಗಿ ಬೀಜ ತೆಗೆಯಿರಿ. ಬೀಜ ಉಳಿದರೆ ಬಾಯಿ ಗಂಟಲು ತುರಿಸುತ್ತದೆ. ನಂತರ ಉಪ್ಪು, ಬೆಲ್ಲ, ಹುಳಿ, ಹಸಿಮೆಣಸು, ತುಂಡು ಮಾಡಿದ ಕಾನಕಲ್ಲಟೆ ಕಾಯಿ, ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಎಳ್ಳನ್ನು ಎಣ್ಣೆ ಹಾಕದೆ ಹುರಿದು, ಒಣಮೆಣಸು, ಎಣ್ಣೆ ಹಾಕಿ ಹುರಿದು, ತೆಂಗಿನತುರಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೇಯಿಸಿದ ಕಾನಕಲ್ಲಟೆ ಹೋಳುಗಳಿಗೆ ರುಬ್ಬಿದ ಮಿಶ್ರಣ, ಸಾಕಷ್ಟು ನೀರು ಸೇರಿಸಿ 1 ಕುದಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ ಕರಿಬೇವಿನೆಲೆ ಒಗ್ಗರಣೆ ಕೊಡಿ. ಈ ಪದಾರ್ಥ ತುಂಬ ನೀರಾಗಿ  ಇರದೆ ಸ್ವಲ್ಪ ದಪ್ಪವಿರಬೇಕು. ಅನ್ನ ದೋಸೆ ಜೊತೆ ತಿನ್ನಲು ರುಚಿ.




ಕಾನಕಲ್ಲಟೆ ಮಜ್ಜಿಗೆಹುಳಿ (ಮೇಲೋಗರ)




ಬೇಕಾಗುವ ವಸ್ತುಗಳು: 1/2 ಕಪ್ ಸಣ್ಣಗೆ ತುಂಡುಮಾಡಿದ ಮಂಗಳೂರು ಸೌತೆ, 15-20 ಕಾನಕಲ್ಲಟೆಕಾಯಿ, 2 ಕಪ್ ಹಸಿ ತೆಂಗಿನಕಾಯಿಯ ತುರಿ, 1/2 ಚಮಚ ಕೆಂಪುಮೆಣಸಿನ ಪುಡಿ, 1 ಹಸಿಮೆಣಸು, 1 ಚಿಟಿಕಿ ಅರಸಿನಪುಡಿ, 1 ಕಪ್ ದಪ್ಪ ಸಿಹಿ ಮಜ್ಜಿಗೆ, 1/2 ಕಪ್ ದಪ್ಪ ಹುಳಿಮಜ್ಜಿಗೆ, 1/2 ಚಮಚ ಸಾಸಿವೆ, ರುಚಿಗೆ ತಕ್ಕ ಉಪ್ಪು, 1 ಚಮಚ ತೆಂಗಿನೆಣ್ಣೆ, ಸಣ್ಣ ತುಂಡು ಕೆಂಪುಮೆಣಸು, 1 ಎಸಳು ಕರಿಬೇವಿನೆಲೆ

ಮಾಡುವ ವಿಧಾನ: ಕಾನಕಲ್ಲಟೆ ಕಾಯಿಯನ್ನು ಅಡ್ಡಕೆ ತುಂಡುಮಾಡಿ ಎರಡು ಹೋಳು ಮಾಡಿ. ನಂತರ ಒಲೆಯ ಮೇಲೆ ಒಂದು ಪಾತ್ರೆಯಿಟ್ಟು ಸ್ವಲ್ಪ ನೀರು ಹಾಕಿ ಹದ ಉರಿಯಲ್ಲಿ ತುಂಡು ಮಾಡಿದ ಕಾನಕಲ್ಲಟೆ ಕಾಯಿ ಹಾಕಿ 1 ಕುದಿ ಕುದಿಸಿ ಇಳಿಸಿ, ಕೈಯಲ್ಲಿ ಹಿಸುಕಿ ಬೀಜ ತೆಗೆದು, ತುಂಡುಮಾಡಿದ ಸೌತೆ, ಅರಸಿನ ಪುಡಿ, ಉಪ್ಪು, ಕೆಂಪುಮೆಣಸಿನ ಪುಡಿ, ಸೀಳಿದ ಹಸಿಮೆಣಸು ಸೇರಿಸಿ ಪಾತ್ರೆಗೆ ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ. ತೆಂಗಿನತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಬೇಯಿಸಿದ ಕಾನಕಲ್ಲಟೆ ಸೌತೆ ಮಿಶ್ರಣಕ್ಕೆ ಸೇರಿಸಿ. ನಂತರ ಸಿಹಿ ಮಜ್ಜಿಗೆ, ಹುಳಿ ಮಜ್ಜಿಗೆ, ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಟ್ಟು ಒಂದು ಕುದಿ ಕುದಿಸಿ. ನಂತರ ತೆಂಗಿನೆಣ್ಣೆಯಲ್ಲಿ ಸಾಸಿವೆ ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಈ ಮೇಲೋಗರ ಸಾಂಬಾರಿಗಿಂತ ದಪ್ಪವಿರಬೇಕು. ಈ ಮೇಲೋಗರ ಸ್ವಾದಿಷ್ಟವಾಗಿದ್ದು, ಉಣ್ಣಲು ಬಹಳ ರುಚಿಯಾಗಿರುತ್ತದೆ.

ಕಾನಕಲ್ಲಟೆ ಕಾಯಿ ಸಾಸಿವೆ




ಬೇಕಾಗುವ ವಸ್ತುಗಳು: 15-20 ಕಾನಕಲ್ಲಟೆ ಕಾಯಿ, 1 1/2 ಕಪ್ ತೆಂಗಿನ ತುರಿ, 1/2 ಚಮಚ ಕೆಂಪುಮೆಣಸಿನ ಪುಡಿ, 1 ಒಣಮೆಣಸು, 1/2 ಚಮಚ ಸಾಸಿವೆ, 1/2 ಚಮಚ ಬೆಲ್ಲ, ರುಚಿಗೆ ತಕ್ಕ ಉಪ್ಪು, 1/2 ಚಮಚ ಸಿಹಿ ಮಜ್ಜಿಗೆ

ಮಾಡುವ ವಿಧಾನ: ಕಾನಕಲ್ಲಟೆ ಕಾಯಿಯನ್ನು ಅಡ್ಡಕ್ಕೆ ತುಂಡು ಮಾಡಿ. ನಂತರ ಒಲೆಯ ಮೇಲೆ ಹದ ಉರಿಯಲ್ಲಿ ಒಂದು ಪಾತ್ರೆಯಿಟ್ಟು ಸ್ವಲ್ಪ ನೀರು ಹಾಕಿ  ತುಂಡು ಮಾಡಿದ ಕಾನಕಲ್ಲಟೆ ಕಾಯಿ ಹಾಕಿ 1 ಕುದಿ ಕುದಿಸಿ ಇಳಿಸಿ, ಕೈಯಲ್ಲಿ ಹಿಸುಕಿ ಬೀಜ ತೆಗೆದು, ಉಪ್ಪು, ಮೆಣಸಿನಪುಡಿ, ಬೆಲ್ಲ ಮತ್ತು ಸ್ವಲ್ಪ ನೀರು ಸೇರಿಸಿ ಬೇಯಿಸಿ. ಆರಿದ ನಂತರ ಮಜ್ಜಿಗೆ ಹಾಕಿ. ತೆಂಗಿನ ತುರಿಗೆ 1 ಒಣಮೆಣಸು, ಸಾಸಿವೆ ಸೇರಿಸಿ ನುಣ್ಣಗೆ ರುಬ್ಬಿ. ಬೇಯಿಸಿದ ತರಕಾರಿಗೆ ಹಾಕಿ ಸರಿಯಾಗಿ ತೊಳಸಿ, ಬೌಲ್ ಗೆ ಹಾಕಿ. ಒಣಮೆಣಸು ಕರಿಬೇವಿನಿಂದ ಅಲಂಕರಿಸಿ. ಇದನ್ನು ಕುದಿಸುವ ಕ್ರಮವಿಲ್ಲ. ಒಗ್ಗರಣೆಯೂ ಬೇಡ.