ನುಗ್ಗೆ ಸೊಪ್ಪು - DrumStick Leaves

ನುಗ್ಗೆ ಸೊಪ್ಪಿನ ವಿವಿಧ ಪೌಷ್ಠಿಕ ಅಡುಗೆಗಳು


ನುಗ್ಗೆಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ರಂಜಕ ಮತ್ತು ಕ್ಯಾಲ್ಸಿಯಂ ಅಂಶಗಳಿರುತ್ತವೆ. ಇದರ ರಸವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಇರುಳುಗಣ್ಣು ತೊಂದರೆ ಬಾರದಂತೆ ತಡೆಗಟ್ಟಲು ಇದರ ರಸದ ಸೇವನೆ ಒಳ್ಳೆಯದು. ರಕ್ತಹೀನತೆಯಿಂದ ನರಳುವವರಿಗೆ ಪ್ರಯೋಜನಕಾರಿಯಾಗಿದೆ.

ನುಗ್ಗೆಸೊಪ್ಪಿನ ವಡೆ



ಬೇಕಾಗುವ ವಸ್ತುಗಳು: 1 ಕಪ್ ಎಳೆ ನುಗ್ಗೆಸೊಪ್ಪು, 1/2 ಕಪ್ ಕಡಲೆಬೇಳೆ, 1/4 ಕಪ್ ತೊಗರಿಬೇಳೆ, 4 ಚಮಚ ಉದ್ದಿನಬೇಳೆ, 1/4 ಕಪ್ ಬೆಳ್ತಿಗೆ ಅಕ್ಕಿ, 1 ಈರುಳ್ಳಿ, 3 ಹಸಿಮೆಣಸು, 2 ಒಣಮೆಣಸು, ಚಿಟಿಕಿ ಇಂಗು, ರುಚಿಗೆ ತಕ್ಕ ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ, 1/2 ಚಮಚ ಹುಳಿರಸ.

ಮಾಡುವ ವಿಧಾನ: ಅಕ್ಕಿ ಮತ್ತು ಬೇಳೆಗಳನ್ನು ಒಟ್ಟಿಗೆ ಹಾಕಿ 1 ಗಂಟೆ ನೆನೆಸಿ. ನಂತರ ತೊಳೆದು ನೀರು ಬಸಿದು, ಹುಳಿ, ಹಸಿಮೆಣಸು, ಒಣಮೆಣಸು, ಇಂಗು, ಉಪ್ಪು ಸೇರಿಸಿ ಗಟ್ಟಿಗೆ ತರಿತರಿಯಾಗಿ ರುಬ್ಬಿ. ನುಗ್ಗೆಸೊಪ್ಪು ತೊಳೆದು ನೀರು ಬಸಿದಿಡಿ. ನೀರುಳ್ಳಿ ಸಣ್ಣಗೆ ಹೆಚ್ಚಿಡಿ. ನಂತರ ರುಬ್ಬಿದ ಅಕ್ಕಿಬೇಳೆ ಮಿಶ್ರಣಕ್ಕೆ - ಹೆಚ್ಚಿದ ನೀರುಳ್ಳಿ, ನುಗ್ಗೆಸೊಪ್ಪು ಬೆರೆಸಿ ಚನ್ನಾಗಿ ಕಲಸಿ. ನಿಂಬೆ ಗಾತ್ರದ ಉಂಡೆ ಮಾಡಿ ಎಣ್ಣೆಪಸೆ ಮಾಡಿದ ಬಾಳೆಲೆ ಯಾ ಪಾಲಿಥೀನ್ ಶೀಟ್ ಮೇಲೆ ಚಪ್ಪಟೆಯಾಗಿ ವಡೆ ತಟ್ಟಿ. ನಂತರ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ರುಚಿಯಾದ ವಡೆ ತಿನ್ನಲು ಸಿದ್ಧ.

ನುಗ್ಗೆಸೊಪ್ಪಿನ ಇಡ್ಲಿ




ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ತೊಳೆದು ಸ್ವಚ್ಛಗೊಳಿಸಿದ ನುಗ್ಗೆಸೊಪ್ಪು, 1/4 ಕಪ್ ಉದ್ದಿನಬೇಳೆ, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಅಕ್ಕಿ ಮತ್ತು ಬೇಳೆಯನ್ನು ತೊಳೆದು 2 ಗಂಟೆ ನೆನೆಸಿ. ನಂತರ ಉಪ್ಪು ಮತ್ತು ನುಗ್ಗೆಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಅಕ್ಕಿಯನ್ನು ತರಿತರಿಯಾಗಿ ರುಬ್ಬಿ. ಎರಡು ಹಿಟ್ಟು ಬೆರೆಸಿಡಿ. ಮಾರನೆ ದಿನ ಉಪ್ಪು ಹಾಕಿ ಸರಿಯಾಗಿ ಕಲಸಿ. ಎಣ್ಣೆಪಸೆ ಮಾಡಿದ ಇಡ್ಲಿತಟ್ಟೆಯಲ್ಲಿ ಹಾಕಿ ಉಗಿಯಲ್ಲಿ 15-20 ನಿಮಿಷ ಬೇಯಿಸಿ. ಈಗ ಪೌಷ್ಠಿಕಾಂಶವುಳ್ಳ ನುಗ್ಗೆಸೊಪ್ಪಿನ ಇಡ್ಲಿ ಸವಿಯಲು ಸಿದ್ಧ.




ನುಗ್ಗೆಸೊಪ್ಪಿನ ಪತ್ರೊಡೆ



ಬೇಕಾಗುವ ವಸ್ತುಗಳು: 1 ಕಪ್ ಕುಚ್ಚಲಕ್ಕಿ, 1/4 ಕಪ್ ಬೆಳ್ತಿಗೆ ಅಕ್ಕಿ, 2 ಕಪ್ ನುಗ್ಗೆಸೊಪ್ಪು, 1 ಚಮಚ ಹುಳಿರಸ, 1/2 ಕಪ್ ಕಾಯಿತುರಿ, 6-7 ಒಣಮೆಣಸು, 1 ಚಮಚ ಕೊತ್ತಂಬರಿ, 1/2 ಚಮಚ ಜೀರಿಗೆ, ಚಿಟಿಕಿ ಇಂಗು, 1 ಎಸಳು ಕರಿಬೇವು, ಚಿಟಿಕಿ ಅರಿಸಿನ, 1 ಚಮಚ ಸಾಸಿವೆ, 11/2 ಚಮಚ ಎಣ್ಣೆ, 1 ಚಮಚ ಬೆಲ್ಲದ ಪುಡಿ, ರುಚಿಗೆ ಉಪ್ಪು, 1 ಚಮಚ ಉದ್ದಿನಬೇಳೆ

ಮಾಡುವ ವಿಧಾನ: ಅಕ್ಕಿಗಳೆರಡನ್ನು, 7-8 ಗಂಟೆ ನೀರಿನಲ್ಲಿ ನೆನೆಸಿ. ನಂತರ ಕೊತ್ತಂಬರಿ, ಜೀರಿಗೆ, ಒಣಮೆಣಸು, ಇಂಗು, ಕರಿಬೇವು, ಅರಿಸಿನ, ಹುಳಿರಸ, ಸ್ವಲ್ಪ ಕಾಯಿತುರಿ, ನೀರು ಸೇರಿಸಿ ರುಬ್ಬಿ. ನಂತರ ತೊಳೆದ ಅಕ್ಕಿ ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿ. ನಂತರ ನುಗ್ಗೆಸೊಪ್ಪು ಸೇರಿಸಿ ಬಾಡಿಸಿದ ಬಾಳೆಲೆಯಲ್ಲಿ 2 ಸಟ್ಟುಗ ಹಿಟ್ಟು ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಉದ್ದಿನಬೇಳೆ ಹಾಕಿ ಹುರಿದು ತಣಿದ ಪತ್ರೊಡೆ  ಪುಡಿಮಾಡಿ ಹಾಕಿ.  ನಂತರ ಕಾಯಿತುರಿ, ಬೆಲ್ಲದಪುಡಿ ಸೇರಿಸಿ ಸರಿಯಾಗಿ ಬೆರೆಸಿ ಕೆಳಗಿಳಿಸಿ. ಈಗ ರುಚಿಯಾದ ಪತ್ರೊಡೆ ಸವಿಯಲು ಸಿದ್ಧ.
ಪತ್ರೊಡೆ ಒಗ್ಗರಣೆ ಮಾಡದೆ ಹಾಗೆಯೇ ತೆಂಗಿನೆಣ್ಣೆ ಜೇನು ಯಾ ಬೆಲ್ಲದರವೆಯೊಂದಿಗೆ ತಿನ್ನಬಹುದು. ಮೊಸರಿಗೆ ಹಾಕಿಯೂ ಸವಿಯಬಹುದು. 

ಸೇಬಿನ ಅಡುಗೆ - APPLE RECIPES

ಸೇಬಿನ ರುಚಿಕರ ಅಡುಗೆಗಳು

ಸೇಬು ಮಲಬದ್ಧತೆಗೆ ಉತ್ತಮ ಔಷಧಿ. ಹೊಟ್ಟೆವಾಯು, ಯೂರಿಕ್ ಆಮ್ಲದ ಕೆಡುಕಿನಿಂದ ಬರುವ ವಾತ, ಕರುಳುಗಳಲ್ಲಿನ ಕೀಟಾಣುಗಳ ನಾಶ ಇವುಗಳಿಗೆ ಸೇಬು ಔಷಧಿ. ಹೃದಯ ಮಿದುಳು ಮತ್ತು ಶ್ವಾಸಕೋಶಗಳಿಗೆ ಶಕ್ತಿ ಹಾಗೂ ಮಾಂಸಖಂಡಗಳಿಗೆ ಬಲವನ್ನು ಕೊಡುತ್ತದೆ. 

ಸೇಬಿನ ಗೊಜ್ಜು 

ಬೇಕಾಗುವ ವಸ್ತುಗಳು : ಒಂದು ಕಪ್ ಸಣ್ಣಗೆ ಹೆಚ್ಚಿದ ಸೇಬಿನ ಚೂರು, 1 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, ಚಿಟಿಕಿ ಇಂಗು, 1 ಎಸಳು ಕರಿಬೇವಿನೆಲೆ, 1 ಚಮಚ ಹುಳಿ ರಸ, 1 ಚಮಚ ಬೆಲ್ಲ, 2 ಚಮಚ ರಸಂ ಪುಡಿ, ರುಚಿಗೆ ತಕ್ಕಷ್ಟು ಉಪ್ಪು. 

ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಜೀರಿಗೆ ಹಾಕಿ ಸಿಡಿದಾಗ ಇಂಗು ಕರಿಬೇವಿನೆಲೆ ಹಾಕಿ . ನಂತರ ಸ್ವಲ್ಪ ನೀರು, ಹುಳಿ ರಸ, ಬೆಲ್ಲ, ಸೇಬಿನ ಚೂರು, ರಸಂ ಪುಡಿ ಮತ್ತು ಉಪ್ಪು ಹಾಕಿ ಐದು ನಿಮಿಷ ಕುದಿಸಿ ನಂತರ ಒಲೆಯಿಂದ ಇಳಿಸಿ. ಅನ್ನದೊಂದಿಗೆ ಸವಿಯಲು ಈ ಗೊಜ್ಜು ರುಚಿಯಾಗಿರುತ್ತದೆ. 







ಸೇಬಿನ ಕೇಸರಿಭಾತ್


ಬೇಕಾಗುವ ವಸ್ತುಗಳು: 1 ಕಪ್ ಮೀಡಿಯಂ ರವೆ, 1/2 ಕಪ್ ರುಬ್ಬಿದ ಸೇಬಿನ ಪೇಸ್ಟ್, 11/2 ಕಪ್ ಸಕ್ಕರೆ, ಸ್ವಲ್ಪ ಕೇಸರಿ ಬಣ್ಣ ಯಾ ಕೇಸರಿ ದಳ, 3/4 ಕಪ್ ತುಪ್ಪ, 7-8 ಗೋಡಂಬಿ, 10-12 ದ್ರಾಕ್ಷೆ, 1 ಚಮಚ ಏಲಕ್ಕಿ ಪುಡಿ

ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ತುಪ್ಪ ಹಾಕಿ. ಬಿಸಿಯಾದಾಗ ರವೆ ಹಾಕಿ ಪರಿಮಳ ಬರುವವರೆಗೆ ಹುರಿದು ಕೆಳಗಿಳಿಸಿ. ನಂತರ 3 ಕಪ್ ನೀರು ಹಾಕಿ ಕುದಿಯಲು ಆರಂಭವಾದಾಗ ಹುರಿದ ರವೆ ಹಾಕಿ. ರವೆ ಬೆಂದ ಮೇಲೆ ಸೇಬಿನ ಪೇಸ್ಟ್ ಹಾಕಿ.  ಮಿಶ್ರಣ ಚೆನ್ನಾಗಿ ಬೆರೆತಾಗ ಸಕ್ಕರೆ ಹಾಕಿ. ಸಕ್ಕರೆ ಕರಗಿದ ಮೇಲೆ ತುಪ್ಪ ಹಾಕಿ. ಹಾಲಲ್ಲಿ ನೆನೆಸಿದ ಕೇಸರಿ ಹಾಕಿ ನಂತರ ತುಪ್ಪ ಹಾಕಿ. ಬಾಣಲೆಯಿಂದ ತಳ ಬಿಡುತ್ತಾ ಬಂದಾಗ, ತುಪ್ಪದಲ್ಲಿ ಹುರಿದ ದ್ರಾಕ್ಷೆ ಗೋಡಂಬಿ ನಂತರ ಏಲಕ್ಕಿ ಹಾಕಿ ಸರಿಯಾಗಿ ತೊಳಸಿ ಒಲೆಯಿಂದ ಕೆಳಗಿಳಿಸಿ. ಈಗ ಘಮಘಮಿಸುವ ಸೇಬಿನ ಕೇಸರಿಭಾತನ್ನು ಸವಿಯಿರಿ. 




ಸೇಬಿನ ಸಿಹಿ ಅನ್ನ

ಬೇಕಾಗುವ ವಸ್ತುಗಳು : 1 ಸೇಬು ಹಣ್ಣು, 5-6 ಮುಸುಂಬಿ ಸೊಳೆ, 1 ಕಪ್ ಅನ್ನ, 1/2 ಕಪ್ ಸಕ್ಕರೆ, 1/4 ಕಪ್ ತುಪ್ಪ, 1 ಚಮಚ ಕಡಲೆಬೇಳೆ, 1/2 ಚಮಚ ಜೀರಿಗೆ, ಸಣ್ಣ ತುಂಡು ಕೆಂಪು ಮೆಣಸು, 7-8 ಗೋಡಂಬಿ, 10-12 ಒಣದ್ರಾಕ್ಷೆ, ಕೇಸರಿ ದಳ ಸ್ವಲ್ಪ, ಚಟಿಕಿ ಉಪ್ಪು, 2 ಹನಿ ನಿಂಬೆರಸ. 

ಮಾಡುವ ವಿಧಾನ : ಸೇಬು ಹಣ್ಣನ್ನು ಸಣ್ಣ ಹೋಳುಗಳಾಗಿ ತುಂಡು ಮಾಡಿ. ಒಂದು ಪಾತ್ರೆಯಲ್ಲಿ ಒಂದು ಕಪ್ ನೀರಿಗೆ 1/2 ಕಪ್ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ ಎಳೆ ಪಾಕ ಮಾಡಿಡಿ. ಇದಕ್ಕೆ ಹೆಚ್ಚಿದ ಸೇಬಿನ ಚೂರು, ಮುಸುಂಬಿ ಹಣ್ಣಿನ ಕುಸುಮ (ವಿ. ಸೂ: ಮುಸುಂಬಿ ಸೊಳೆಗಳಿಂದ ತೆಗೆದ ಕುಸುಮ ಮಾತ್ರ) ಹಾಕಿ ಹದಿನೈದು ನಿಮಿಷ ಮುಚ್ಚಿಡಿ. ಕೇಸರಿಯನ್ನು ಹಾಲಿನಲ್ಲಿ ನೆನೆಸಿಡಿ. ಉದುರುದುರಾಗಿ ಅನ್ನ ಮಾಡಿ. ನಂತರ ಒಂದು ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಜೀರಿಗೆ, ಕಡಲೆಬೇಳೆ, ಕೆಂಪು ಮೆಣಸಿನ ಚೂರು ಹಾಕಿ ಹುರಿದು, ಗೋಡಂಬಿ ದ್ರಾಕ್ಷೆ ಹಾಕಿ ಹುರಿದು ಸಕ್ಕರೆ ಪಾಕದಲ್ಲಿ ಹಾಕಿದ್ದ ಹಣ್ಣಿನ ಚೂರು, ಚಿಟಿಕಿ ಉಪ್ಪು ಹಾಕಿ ತೊಳಸಿ. ಹಾಲಿನಲ್ಲಿ ನೆನೆಸಿದ ಕೇಸರಿ ಹಾಕಿ ಸರಿಯಾಗಿ ಬೆರೆಸಿ ಒಲೆಯಿಂದ ಕೆಳಗಿಳಿಸಿ. ನಂತರ ಮಾಡಿಟ್ಟ ಅನ್ನ, ಉಪ್ಪು ಸಕ್ಕರೆ, ಎರಡು ಚಮಚ ನಿಂಬೆರಸ ಹಾಕಿ ಸಟ್ಟುಗದಿಂದ ಬೆರೆಸಿದರೆ ಘಮಘಮಿಸುವ ಸಿಹಿಅನ್ನ ಸವಿಯಲು ಸಿದ್ಧ.     

ಕಿತ್ತಳೆ - Orange

ಕಿತ್ತಳೆ ಹಣ್ಣಿನ ಪೌಷ್ಠಿಕ ರುಚಿಕರ ಅಡುಗೆಗಳು

ಈಗ ಕಿತ್ತಳೆ ಹಣ್ಣಿನ ಸೀಸನ್. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಾಮಿನ್ ಸಿ ಇರುತ್ತದೆ. ಇದರ ಸೇವನೆಯಿಂದ ಹೃದಯ, ಸ್ನಾಯುಗಳಲ್ಲಿ ಹಾಗೂ ಮಿದುಳಿನಲ್ಲಿ ಶಕ್ತಿಯ ಸಂಚಾರವಾಗುತ್ತದೆ. ನೆಗಡಿ, ದಣಿವು, ಆಯಾಸ, ಸುಸ್ತು ನಿವಾರಣೆಯಾಗುತ್ತದೆ. ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ತುಂಬುತ್ತದೆ. 

ಕಿತ್ತಳೆ ಹಣ್ಣಿನ ಪಲಾವ್



ಬೇಕಾಗುವ ವಸ್ತುಗಳು: 1 ಚಮಚ ಎಣ್ಣೆ, 2 ಲವಂಗ, 1/4" ಉದ್ದದ ಚೆಕ್ಕೆ,  1 ಚಮಚ ಜೀರಿಗೆ, 10 ನಿಮಿಷ ನೆನೆಸಿದ 1 ಕಪ್ ಬೆಳ್ತಿಗೆ ಅಕ್ಕಿ, 1 ಕಪ್ ಕಿತ್ತಳೆ ರಸ, 2 ಚಮಚ ಕ್ಯಾರೆಟ್ ಚೂರು, 1/4 ಚಮಚ ಅರಸಿನ ಪುಡಿ, 1/2 ಚಮಚ ಖಾರದ ಪುಡಿ, ರುಚಿಗೆ ಉಪ್ಪು

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ, ಬಿಸಿಯಾದಾಗ ಲವಂಗ ಚೆಕ್ಕೆ, ಜೀರಿಗೆ ಹಾಕಿ. ಜೀರಿಗೆ ಸಿಡಿದಾಗ, ನೆನೆಸಿದ ಬೆಳ್ತಿಗೆ (ಸೋನಾ ಮಸೂರಿ) ಅಕ್ಕಿ ಹಾಕಿ. ಸ್ವಲ್ಪ ಹುರಿದು, ಕಿತ್ತಳೆ ರಸ, ಕ್ಯಾರೆಟ್ ಚೂರು, ಅರಸಿನ ಪುಡಿ, ಉಪ್ಪು, ಖಾರದ ಪುಡಿ, 1 ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. ಕುಕ್ಕರಿನಲ್ಲಿ ಮೂರು ವಿಸಿಲ್ ಹಾಕಿಸಿ, ತಣಿದ ನಂತರ ಬೌಲ್ ಗೆ ಹಾಕಿ, ಕಿತ್ತಳೆ ಹಣ್ಣಿನ ತೊಳೆ ಹಾಕಿ ತೊಳಸಿ. ಈಗ ಪರಿಮಳಭರಿತ ಪೌಷ್ಠಿಕ ಪಲಾವನ್ನು ಸಲಾಡಿನೊಂದಿಗೆ ಸವಿಯಿರಿ. 






ಕಿತ್ತಳೆ ಅಪ್ಪೆಹುಳಿ


ಬೇಕಾಗುವ ವಸ್ತುಗಳು: 1 ಕಪ್ ಕಿತ್ತಳೆ ಸೊಳೆ, 2 ಚಮಚ ಬೆಲ್ಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, ಚಿಟಿಕಿ ಇಂಗು, 1 ಒಣಮೆಣಸು, 1 ಕರಿಬೇವಿನೆಸಳು, 1 ಚಮಚ ಎಣ್ಣೆ ಯಾ ತುಪ್ಪ

ಮಾಡುವ ವಿಧಾನ: ಕಿತ್ತಳೆ ಸೊಳೆ ಮಿಕ್ಸಿಗೆ ಹಾಕಿ ರುಬ್ಬಿ, ನಂತರ ಶೋಧಿಸಿ, ಸ್ವಲ್ಪ ನೀರು ಸೇರಿಸಿ. ಬೆಲ್ಲ ಉಪ್ಪು ರಸಕ್ಕೆ ಹಾಕಿ. ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಇಂಗು, ಒಣಮೆಣಸು ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಟ್ಟು ಸರಿಯಾಗಿ ತೊಳಸಿ. ಜ್ವರ ಬಂದಾಗ, ನೆಗಡಿಯಾದಾಗ, ಬಾಯಿ ರುಚಿ ಕೆಟ್ಟಾಗ ಈ ಗೊಜ್ಜು ಅನ್ನದೊಂದಿಗೆ ಸವಿಯಲು ಚೆನ್ನಾಗಿರುತ್ತದೆ. 








ಕಿತ್ತಳೆ ಸಿಪ್ಪೆ ಚಟ್ನಿ 



ಬೇಕಾಗುವ ವಸ್ತುಗಳು:  1 ಕಪ್ ಸಣ್ಣಗೆ ಹೆಚ್ಚಿದ ಕಿತ್ತಳೆ ಸಿಪ್ಪೆ, 1 ಚಮಚ ತುಪ್ಪ, 5-6 ಒಣಮೆಣಸು, 1/2 ಕಪ್ ತೆಂಗಿನ ತುರಿ, 1 ಚಮಚ ಕಡ್ಲೆಬೇಳೆ, 1 ಚಮಚ ಉದ್ದಿನಬೇಳೆ, ಸಣ್ಣ ತುಂಡು ಬೆಲ್ಲ, 1 ಎಸಳು ಕರಿಬೇವಿನೆಲೆ, ಚಿಟಿಕಿ ಇಂಗು, 1/2 ಚಮಚ ಸಾಸಿವೆ. 

ಮಾಡುವ ವಿಧಾನ:  ಬಾಣಲೆಗೆ ತುಪ್ಪ ಹಾಕಿ, ಬಿಸಿಯಾದಾಗ ಸಣ್ಣಗೆ ಹೆಚ್ಚಿದ ಕಿತ್ತಳೆ ಸಿಪ್ಪೆ ಹಾಕಿ, ಕೆಂಪಗೆ ಹುರಿದು ಕೆಳಗಿಳಿಸಿ. ನಂತರ ಉದ್ದಿನಬೇಳೆ, ಕಡಲೇಬೇಳೆ, ಒಣಮೆಣಸು ಹಾಕಿ ಕೆಂಪಗೆ ಹುರಿದು ಕೆಳಗಿಳಿಸಿ. ನಂತರ ಹುರಿದ ಕಿತ್ತಳೆ ಸಿಪ್ಪೆ, ತೆಂಗಿನ ತುರಿ, ಉಪ್ಪು, ಬೆಲ್ಲ, ಹುರಿದ ಮಸಾಲೆ ಸೇರಿಸಿ ಮಿಕ್ಸಿಗೆ ಹಾಕಿ ಸ್ವಲ್ಪ ತರಿತರಿಯಾಗಿ ರುಬ್ಬಿ. ನಂತರ ಕರಿಬೇವು, ಸಾಸಿವೆ, ಇಂಗಿನ ಒಗ್ಗರಣೆ ಕೊಡಿ. ಘಮಘಮಿಸುವ ಈ ಚಟ್ನಿ ಅನ್ನದೊಂದಿಗೆ, ದೋಸೆಜೊತೆ ತಿನ್ನಲು ರುಚಿ. 





ಕಿತ್ತಳೆ ಹಣ್ಣಿನ ರಸಾಯನ


ಬೇಕಾಗುವ ವಸ್ತುಗಳು: 4-5 ಸಿಹಿ ಕಿತ್ತಳೆ ಹಣ್ಣುಗಳು, 1 ಕಪ್ ಸಕ್ಕರೆ, 4 ಕಪ್ ತೆಂಗಿನ ತುರಿ, 1/2 ಚಮಚ ಏಲಕ್ಕಿ ಪುಡಿ, ಸ್ವಲ್ಪ ಕುಂಕುಮ ಕೇಸರಿ

ಮಾಡುವ ವಿಧಾನ: ಕಿತ್ತಳೆಹಣ್ಣನ್ನು ಸುಲಿದು, ಕುಸುಮವನ್ನು ಒಂದು ಬೌಲ್ ಗೆ  ಹಾಕಿ. ತೆಂಗಿನ ತುರಿ ರುಬ್ಬಿ ಹಾಲು ತೆಗೆದಿಡಿ. ಕಿತ್ತಳೆ ಹಣ್ಣಿನ ಕುಸುಮಕ್ಕೆ ಸಕ್ಕರೆ ಹಾಕಿ ತೊಳಸಿ. ನಂತರ ತೆಂಗಿನಹಾಲು ಹಾಕಿ ಏಲಕ್ಕಿ ಪುಡಿ, ಕುಂಕುಮ ಕೇಸರಿ ಸೇರಿಸಿ ಇಡಿ. ಈ ರುಚಿಯಾದ ರಸಾಯನವನ್ನು ಗ್ಲಾಸಿಗೆ ಹಾಕಿ ಚಮಚದಿಂದ ಆಸ್ವಾದಿಸಿ. 

ಮೂಸುಂಬಿ ಖಾದ್ಯಗಳು - Mosambi

ಮೂಸುಂಬಿ ಹಣ್ಣಿನ ರುಚಿಕರ ಖಾದ್ಯಗಳು

ಮೂಸುಂಬಿ ಹಣ್ಣನ್ನು ಸೇವಿಸುವುದರಿಂದ ಆಯಾಸ ಪರಿಹಾರವಾಗಿ ಬಾಯಾರಿಕೆ ನೀಗುವುದು. ಹೃದಯ ದೌರ್ಬಲ್ಯವುಳ್ಳವರಿಗೆ ಈ ಹಣ್ಣು ಒಳ್ಳೆಯದು. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು.

ಮೂಸುಂಬಿ ಹಣ್ಣಿನ ಗೊಜ್ಜು

ಬೇಕಾಗುವ ವಸ್ತುಗಳು: ಒಂದು ಕಪ್ ಸಿಪ್ಪೆ ಬೀಜ ತೆಗೆದ ಮೂಸುಂಬಿ ಹಣ್ಣಿನ ತಿರುಳು, 2 ಹಸಿಮೆಣಸು, 2 ಚಮಚ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, 1 ಒಣಮೆಣಸು, ಚಿಟಿಕಿ ಇಂಗು, 1 ಚಮಚ ಎಣ್ಣೆ

ಮಾಡುವ ವಿಧಾನ: ಮೂಸುಂಬಿ ಹಣ್ಣಿನ ತಿರುಳನ್ನು ಹಬೆಯಲ್ಲಿ ಬೇಯಿಸಿ ನುಣ್ಣಗೆ ರುಬ್ಬಿ. ಅದಕ್ಕೆ ಉದ್ದಕ್ಕೆ ತುಂಡುಮಾಡಿದ ಹಸಿಮೆಣಸು, ಬೆಲ್ಲ, ಉಪ್ಪು ಹಾಕಿ ರಸವನ್ನು ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಇಂಗು ಮತ್ತು ಒಣಮೆಣಸಿನ ತುಂಡು ಹಾಕಿ ಒಗ್ಗರಣೆ ಕೊಡಿ. ಅನ್ನದೊಂದಿಗೆ ಈ ಗೊಜ್ಜು ತಿನ್ನಲು ರುಚಿಯಾಗಿರುತ್ತದೆ.





ಮೂಸುಂಬಿ ಸಿಪ್ಪೆ ಚಟ್ನಿ




ಬೇಕಾಗುವ ವಸ್ತುಗಳು: 1 ಕಪ್ ಸಣ್ಣಗೆ ಹೆಚ್ಚಿದ ಮೂಸುಂಬಿ ಸಿಪ್ಪೆ, 1 ಚಮಚ ತುಪ್ಪ, 5-6 ಒಣಮೆಣಸು, 1/2 ಕಪ್ ತೆಂಗಿನ ತುರಿ, 1 ಚಮಚ ಕಡಲೆಬೇಳೆ,  1 ಚಮಚ ಉದ್ದಿನಬೇಳೆ, ಚಿಟಿಕಿ ಇಂಗು, 1 ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು, 1/2 ಚಮಚ ಸಾಸಿವೆ

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ ಬಿಸಿಯಾದಾಗ ಅನುಕ್ರಮವಾಗಿ ಮೂಸಂಬಿ ಹಣ್ಣಿನ ಸಿಪ್ಪೆ, ಒಣಮೆಣಸು, ಕಡಲೆಬೇಳೆ, ಉದ್ದಿನಬೇಳೆ ಹಾಕಿ ಕೆಂಪಗೆ ಹುರಿದು, ಕೊನೆಗೆ ತೆಂಗಿನ ತುರಿ ಹಾಕಿ ಸ್ವಲ್ಪ ಹುರಿದು, ನಂತರ ಎಲ್ಲವನ್ನೂ ಮಿಕ್ಸಿಗೆ ಹಾಕಿ ಬೆಲ್ಲ ಮತ್ತು ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ. ನಂತರ ತುಪ್ಪದಲ್ಲಿ ಸಾಸಿವೆ, ಇಂಗು ಮತ್ತು ಕರಿಬೇವಿನೆಲೆಯ ಒಗ್ಗರಣೆ ಕೊಡಿ. ವಿಶಿಷ್ಟ ರುಚಿಯ ಈ ಚಟ್ನಿ ದೋಸೆ, ಇಡ್ಲಿ, ಅನ್ನದೊಂದಿಗೆ ಸವಿಯಲು ರುಚಿ.



ಮೂಸುಂಬಿ ಹಣ್ಣಿನ ಭಾತ್

ಬೇಕಾಗುವ ವಸ್ತುಗಳು: ಎರಡು ಕಪ್ ಸಿಪ್ಪೆ ಬೀಜ ತೆಗೆದ ಮೂಸುಂಬಿ ಹಣ್ಣಿನ ತಿರುಳು, 1/2 ಕಪ್ ಬೆಳ್ತಿಗೆ ಅಕ್ಕಿ, 1/2 ಚಮಚ ಜೀರಿಗೆ, ಕಾಲು ಚಮಚ ಮೆಂತೆ, 4-5 ಒಣಮೆಣಸು, 3 ಚಮಚ ಕೊಬ್ಬರಿ ತುರಿ, 1 ಚಮಚ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ತುಪ್ಪ, 1/2 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1/2 ಚಮಚ ಕಡಲೆಬೇಳೆ, 1/2 ಚಮಚ ಉದ್ದಿನಬೇಳೆ, ಸ್ವಲ್ಪ ಕೊತ್ತಂಬರಿಸೊಪ್ಪು

ಮಾಡುವ ವಿಧಾನ: ಬಾಣಲೆ ಒಲೆಯಮೇಲಿಟ್ಟು ತುಪ್ಪ ಹಾಕಿ ಬಿಸಿಯಾದಾದಾಗ ಚಿಕ್ಕ ತುಂಡು ಮಾಡಿದ ಮೂಸುಂಬಿ ಹಣ್ಣಿನ ತಿರುಳನ್ನು ಹಾಕಿ ಕೆಂಪಗೆ ಹುರಿಯಿರಿ. ಅಕ್ಕಿಯಿಂದ ಅನ್ನ ಮಾಡಿಡಿ. ನಂತರ ಬಾಣಲೆಗೆ ಎಣ್ಣೆಹಾಕಿ ಬಿಸಿಯಾದಾಗ ಜೀರಿಗೆ, ಮೆಂತೆ ಮತ್ತು ಕೆಂಪು ಮೆಣಸು ಹಾಕಿ ಹುರಿದು, ಕೊಬ್ಬರಿ ತುರಿ ಸೇರಿಸಿ ಬೆಲ್ಲ ಮತ್ತು ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ. ನಂತರ ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ ಹಾಕಿ. ಬೇಳೆ ಕೆಂಪಾದಾಗ ರುಬ್ಬಿದ ಮಸಾಲೆ, ಮೂಸುಂಬಿ ಹಣ್ಣಿನ ಚೂರು, ಮಾಡಿಟ್ಟ ಅನ್ನ ಹಾಕಿ ಸರಿಯಾಗಿ ಬೆರೆಸಿ. ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಪರಿಮಳಯುಕ್ತವಾದ ಈ ಭಾತ್ ತಿನ್ನಲು ಸೊಗಸಾಗಿರುತ್ತದೆ.  

ಬೆಟ್ಟದ ನೆಲ್ಲಿಕಾಯಿ - Gooseberry

ಬೆಟ್ಟದ ನೆಲ್ಲಿಕಾಯಿಯ ರುಚಿಕರ ಅಡುಗೆಗಳು

ನೆಲ್ಲಿಕಾಯಿಯು "ಸಿ" ಜೀವಸತ್ವದ ಗಣಿ. ಇದರಲ್ಲಿ ರಕ್ತಶೋಧಕ ಗುಣವಿದೆ. ಇದರ ಸೇವನೆಯಿಂದ ಆರೋಗ್ಯ ವರ್ಧಿಸುವುದು. ಆಯುಃ ಪ್ರಮಾಣ ಹೆಚ್ಚಾಗುವುದು. ಮೆದುಳಿಗೆ ಸಂಬಂಧಿಸಿದ ರೋಗಗಳಲ್ಲಿ ನೆಲ್ಲಿಕಾಯಿಯಿಂದ ತಯಾರಿಸಿದ ಯಾವುದೇ ವ್ಯಂಜನ ಉತ್ತಮ ತ್ರಾಣಿಕದಂತೆ ವರ್ತಿಸುವುದು. 



ನೆಲ್ಲಿಕಾಯಿ ಗೊಜ್ಜು


ಬೇಕಾಗುವ ವಸ್ತುಗಳು: 3-4 ನೆಲ್ಲಿಕಾಯಿ, 1 ಚಮಚ ಎಣ್ಣೆ, 1/2 ಚಮಚ ಸಾಸಿವೆ, 1 ಟೊಮೆಟೊ, 1/2 ಚಮಚ ಖಾರದ ಪುಡಿ, 1 ಚಮಚ ಸಾಂಬಾರು ಪುಡಿ, 1/4 ಚಮಚ ಮೆಂತೆ ಪುಡಿ, 1/4 ಚಮಚ ಸಾಸಿವೆ ಪುಡಿ, 1/4 ಚಮಚ ಅರಸಿನ ಪುಡಿ, 2 ಚಮಚ ಬೆಲ್ಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವಿನೆಲೆ, 1 ಒಣಮೆಣಸು

ಮಾಡುವ ವಿಧಾನ: ನೆಲ್ಲಿಕಾಯಿ ತೊಳೆದು ಜಜ್ಜಿ ಬೀಜ ತೆಗೆದು, ತುಂಡುಮಾಡಿ, ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ, ಸಿಡಿದಾಗ ಒಣಮೆಣಸು, ಕರಿಬೇವು ಹಾಕಿ ಸ್ವಲ್ಪ ಹುರಿದು, ನಂತರ ಸಾಂಬಾರು ಪುಡಿ, ಖಾರದ ಪುಡಿ, ಮೆಂತೆ ಪುಡಿ, ಸಾಸಿವೆ, ಅರಸಿನ, ಸ್ವಲ್ಪ ನೀರು ಹಾಕಿ ತೊಳಸಿ. ನಂತರ ಬೇಯಿಸಿದ ನೆಲ್ಲಿಕಾಯಿ ತುಂಡು, ಉಪ್ಪು, ಬೆಲ್ಲ ಹಾಕಿ 5-10 ನಿಮಿಷ ಕುದಿಸಿ. ನಂತರ ಒಲೆಯಿಂದ ಕೆಳಗಿಳಿಸಿ ಪಾತ್ರೆಗೆ ಹಾಕಿ ಕರಿಬೇವಿನಿಂದ ಅಲಂಕರಿಸಿ. ಆರೋಗ್ಯಕರವಾದ ಗೊಜ್ಜು ಅನ್ನದೊಂದಿಗೆ ಬಲುರುಚಿ.








ನೆಲ್ಲಕಾಯಿ - ಶುಂಠಿ ಚಟ್ನಿ


ಬೇಕಾಗುವ ವಸ್ತುಗಳು: 1-2 ನೆಲ್ಲಿಕಾಯಿ,  1/4" ಉದ್ದದ ಶುಂಠಿ, 1/4 ಚಮಚ ಜೀರಿಗೆ, 2-3 ಹಸಿಮೆಣಸು, 1 ಕಪ್ ಕಾಯಿತುರಿ, 1/2 ಚಮಚ ಸಾಸಿವೆ, 1 ಒಣಮೆಣಸು, 1/2 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವಿನೆಲೆ

ಮಾಡುವ ವಿಧಾನ: ನೆಲ್ಲಿಕಾಯಿ ತೊಳೆದು ಜಜ್ಜಿ ಬೀಜ ತೆಗೆದು, ಸಣ್ಣಗೆ ತುಂಡುಮಾಡಿ. ನಂತರ ಶುಂಠಿಚೂರು, ಹಸಿಮೆಣಸು ಕಾಯಿತುರಿ, ಉಪ್ಪು ಸೇರಿಸಿ, ನುಣ್ಣಗೆ ಗಟ್ಟಿಗೆ ರುಬ್ಬಿ. ನಂತರ ಎಣ್ಣೆಯಲ್ಲಿ ಸಾಸಿವೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಗಂಜಿ, ದೋಸೆ, ಇಡ್ಲಿ ಜೊತೆ ತಿನ್ನಲು ರುಚಿ ಹಾಗೂ ಆರೋಗ್ಯದಾಯಕ.










ನೆಲ್ಲಿಕಾಯಿ ಹಲ್ವ


ಬೇಕಾಗುವ ವಸ್ತುಗಳು: 1 ಕಪ್ ನೆಲ್ಲಿಕಾಯಿಯ ಬೀಜ ತೆಗೆದ ತುಂಡುಗಳು, 1 ಕಪ್ ಬೆಲ್ಲದ ಪುಡಿ, 1/2 ಕಪ್ ತುಪ್ಪ, ಚಿಟಿಕಿ ಉಪ್ಪು, 1 ಚಮಚ ಏಲಕ್ಕಿ ಪುಡಿ.

ಮಾಡುವ ವಿಧಾನ: ನೆಲ್ಲಿಕಾಯಿ ತುಂಡುಗಳನ್ನು ಉಪ್ಪು ಹಾಕಿ ಬೇಯಿಸಿ ರುಬ್ಬಿ. ಬಾಣಲೆ ಒಲೆಯ ಮೇಲಿಟ್ಟು ಬೆಲ್ಲದ ಪುಡಿ ಮುಳುಗುವಷ್ಟು ನೀರು ಹಾಕಿ ಕರಗಿಸಿ. ನಂತರ ಸೋಸಿ ಬೇರೆ ಬಾಣಲೆಗೆ ಹಾಕಿ. ಸಣ್ಣ ಉರಿಯಲ್ಲಿ ಕುದಿಸಿ. ನೂಲುಪಾಕವಾದಾಗ ರುಬ್ಬಿದ ನೆಲ್ಲಿಕಾಯಿಯ ಮಿಶ್ರಣ ಹಾಕಿ. ನಂತರ ಕೈಬಿಡದೆ ಚೆನ್ನಾಗೆ ತೊಳಸಿ. ನಂತರ ತುಪ್ಪ ಹಾಕಿ. ಮಿಶ್ರಣ ಬಾಣಲೆಯಿಂದ ತಳಬಿಡುತ್ತಾ ಬಂದಾಗ ಏಲಕ್ಕಿ ಪುಡಿ ಹಾಕಿ ತುಪ್ಪ ಸವರಿದ ತಟ್ಟೆಗೆ ಹಾಕಿ. ಈಗ ಆರೋಗ್ಯಕರವಾದ ಹಲ್ವವನ್ನು ಸವಿದು ನೋಡಿ.










ನೆಲ್ಲಿಕಾಯಿ ಸಾಸಿವೆ


  

ಬೇಕಾಗುವ ವಸ್ತುಗಳು: 1/2 ಕಪ್ ತುರಿದ ನೆಲ್ಲಿಕಾಯಿ, 1/2 ಕಪ್ ಮೊಸರು, 1 ಈರುಳ್ಳಿ, 1 ಹಸಿಮೆಣಸು, 1 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, 1/2 ಚಮಚ ಸಾಸಿವೆ, ಕರಿಬೇವಿನೆಲೆ

ಮಾಡುವ ವಿಧಾನ: ನೆಲ್ಲಿಕಾಯಿ ತುರಿಗೆ ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಚೂರು ಹಾಕಿ ಸರಿಯಾಗಿ ಬೆರೆಸಿ. ಉಪ್ಪು ಹಾಕಿ. ನಂತರ ತುಪ್ಪದಲ್ಲಿ ಸಾಸಿವೆ, ಕರಿಬೇವಿನೆಲೆ ಒಗ್ಗರಣೆ ಕೊಡಿ.  

ಕಷಾಯಗಳು

ಚಳಿಗಾಲದ ಆರೋಗ್ಯಕರ ಕಷಾಯಗಳು

ಚಳಿಗಾಲದ ಶೀತ ಹವೆಗೆ, ತಲೆಭಾರ, ಗಂಟಲು ಕೆರೆತ, ಸೈನಸೈಟೀಸ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಕಷಾಯಗಳನ್ನು ಆಗಾಗ ಮಾಡಿ ಸೇವಿಸುತ್ತಿದ್ದರೆ ದೇಹದ ರೋಗನಿರೋಧಕ ಶಕ್ತಿ ಆರೋಗ್ಯ ಸುಧಾರಿಸುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಉಪಯೋಗಿಸಿ ಮಾಡಬಹುದಾದ ಕಷಾಯಗಳ ಪರಿಚಯ ಇಲ್ಲಿದೆ.

ಕೊತ್ತಂಬರಿ - ಜೀರಿಗೆ - ಜೇಷ್ಠಮಧು ಕಷಾಯ


ಬೇಕಾಗುವ ವಸ್ತುಗಳು: 1/2 ಚಮಚ ಕೊತ್ತಂಬರಿ, 7-8 ಕಾಳುಮೆಣಸು, 1/2 ಚಮಚ ಜೇಷ್ಠಮಧು ಪುಡಿ, 1/2 ಚಮಚ ಒಣಶುಂಠಿ ಪುಡಿ, 1/2 ಚಮಚ ಜೀರಿಗೆ, 1 ಲೋಟ ಹಾಲು, 1 ಚಮಚ ಬೆಲ್ಲ

ಮಾಡುವ ವಿಧಾನ: 1 ಕಪ್ ನೀರು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಕುದಿಸಿ. ಕೊತ್ತಂಬರಿ, ಕಾಳುಮೆಣಸು, ಜೀರಿಗೆ ಸ್ವಲ್ಪ ಬೆಚ್ಚಗೆ ಹುರಿದು ಪುಡಿ ಮಾಡಿ ಕುದಿಯುತ್ತಿರುವ ನೀರಿಗೆ ಹಾಕಿ ತೊಳಸಿ. ನಂತರ ಬೆಲ್ಲ ಹಾಲು ಹಾಕಿ 10-15 ನಿಮಷ ಕುದಿಸಿ. ಶುಂಠಿ ಪುಡಿ, ಜೇಷ್ಠಮಧು ಪುಡಿ ಹಾಕಿ 5 ನಿಮಿಷ ಕುದಿಸಿ ಕೆಳಗಿಳಿಸಿ. ನಂತರ ಸೋಸಿ ಹಾಲು ಬೆರೆಸಿ ಕಪ್ ಗೆ ಹಾಕಿ ಕುಡಿಯಿರಿ. ಚಳಿಗಾಲದ ಶೀತ, ಗಂಟಲು ನೋವು, ಜ್ವರ, ಕೆಮ್ಮು, ದಮ್ಮಿಗೆ ಈ ಕಷಾಯ ಒಳ್ಳೆಯದು.





ಅಮೃತಬಳ್ಳಿಯ ಕಷಾಯ


ಬೇಕಾಗುವ ವಸ್ತುಗಳು: ಅಮೃತಬಳ್ಳಿಯ 1 ಇಂಚು ಉದ್ದದ ತುಂಡು, 1/4 ಇಂಚು ಉದ್ದದ ಜೇಷ್ಠಮಧು, 1 ಚಮಚ ಜೀರಿಗೆ, 5 ತುಳಸಿ ಎಲೆ, 2 ಚಮಚ ಜೇನುತುಪ್ಪ

ಮಾಡುವ ವಿಧಾನ: ಅಮೃತಬಳ್ಳಿಯ ತುಂಡು ಜಜ್ಜಿ, 2 ಕಪ್ ನೀರು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು, ಜಜ್ಜಿದ ಜೇಷ್ಠಮಧು, ಜೀರಿಗೆ, ತುಳಸಿ ಎಲೆ ಹಾಕಿ ಚೆನ್ನಾಗಿ ಕುದಿಸಿ, 1 ಕಪ್ ಗೆ ಇಳಿಸಿ ನಂತರ ಸೋಸಿ ಕಪ್ ಗೆ ಹಾಕಿ. ಜೇನುತುಪ್ಪ ಸೇರಿಸಿ ಬಿಸಿಬಿಸಿಯಾಗಿ ಸೇವಿಸಿ. ಈ ಕಷಾಯ ಜ್ವರ, ಶೀತ, ನೆಗಡಿಯನ್ನು ನಿಯಂತ್ರಿಸುತ್ತದೆ.







ಶುಂಠಿ ಕಷಾಯ


ಬೇಕಾಗುವ ವಸ್ತುಗಳು: 1 ಇಂಚು ಉದ್ದದ ಶುಂಠಿ, 2 ಕಪ್ ನೀರು, ಒಂದುವರೆ ಚಮಚ ಬೆಲ್ಲ, 1/4 ಕಪ್ ಹಾಲು

ತಯಾರಿಸುವ ವಿಧಾನ: ಶುಂಠಿ ತೊಳೆದು ಜಜ್ಜಿ, ಎರಡು ಕಪ್ ನೀರು ಹಾಕಿ, ಕುದಿಸಿ. ನಂತರ ಬೆಲ್ಲ ಹಾಕಿ ಹತ್ತು ನಿಮಿಷ ಕುದಿಸಿ ಕೆಳಗಿಳಿಸಿ. ಬಳಿಕ ಶೋಧಿಸಿ ಬಿಸಿಹಾಲು ಸೇರಿಸಿ ಬಿಸಿಯಿರುವಾಗಲೇ ಕುಡಿಯಿರಿ. ಗಂಟಲು ಕೆರೆತ, ಶೀತ, ಸೈನಸೈಟೀಸ್, ತಲೆಭಾರ ಈ ಸಮಸ್ಯೆಗಳಿಗೆ ಈ ಕಷಾಯ ಒಳ್ಳೆಯದು.







ದೊಡ್ಡಪತ್ರೆ ಕಷಾಯ


ಬೇಕಾಗುವ ವಸ್ತುಗಳು: 3-4 ದೊಡ್ಡಪತ್ರೆ ಎಲೆ, 1/2 ಚಮಚ ಜೀರಿಗೆ, 1/2 ಚಮಚ ಕಾಳುಮೆಣಸು, 2 ಚಮಚ ಜೇನುತುಪ್ಪ

ಮಾಡುವ ವಿಧಾನ: ಜೀರಿಗೆ, ಕಾಳುಮೆಣಸು ಪುಡಿಮಾಡಿ, 1 ಕಪ್ ನೀರಿಗೆ ತೊಳೆದ ದೊಡ್ಡಪತ್ರೆ ಎಲೆ, ಪುಡಿಮಾಡಿದ ಕಾಳುಮೆಣಸು, ಜೀರಿಗೆ ಪುಡಿ ಹಾಕಿ ಮುಚ್ಚಿ, 1 ನಿಮಿಷ ಕುದಿಸಿ ಇಳಿಸಿ. ನಂತರ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಪುನಹ ಪಾತ್ರೆಗೆ ಹಾಕಿ ಸ್ವಲ್ಪ ನೀರುಹಾಕಿ ಮುಚ್ಚಿ ಕುದಿಸಿ ನಂತರ ಒಲೆಯಿಂದ ಇಳಿಸಿ ನಂತರ ಸೋಸಿ ಜೇನುತುಪ್ಪ ಹಾಕಿ ಕುಡಿಯಿರಿ. ಕೆಮ್ಮು, ದಮ್ಮು, ಉಬ್ಬಸ, ಅಜೀರ್ಣ ಮುಂತಾದ ತೊಂದರೆಗಳ ಶಮನಕ್ಕೆ ಒಳ್ಳೆಯದು.





ನೀರುಳ್ಳಿ ಕಷಾಯ


ಬೇಕಾಗುವ ವಸ್ತುಗಳು: 1 ನೀರುಳ್ಳಿ, 1 ಚಮಚ ಜೀರಿಗೆ, 1 ಕಪ್ ನೀರು, ಸಣ್ಣ ತುಂಡು ಬೆಲ್ಲ

ಮಾಡುವ ವಿಧಾನ: ಒಲೆಯ ಮೇಲೆ ಪಾತ್ರೆಯಿಟ್ಟು ನೀರುಹಾಕಿ ನೀರುಳ್ಳಿ ಜೀರಿಗೆ ಹಾಕಿ ಸ್ವಲ್ಪ ಕುದಿದ ಮೇಲೆ ಇಳಿಸಿ, ಮಿಕ್ಸಿಗೆ ಹಾಕಿ ರುಬ್ಬಿ. ಪುನಹ ಒಲೆಯ ಮೇಲಿಟ್ಟು ಸ್ವಲ್ಪ ಬತ್ತುವ ತನಕ ಕುದಿಸಿ. ನಂತರ ಶೋಧಿಸಿ ಗ್ಲಾಸಿಗೆ ಹಾಕಿ ಕುಡಿಯಿರಿ. ಶೀತ ಕೆಮ್ಮಿಗೆ ಇದು ರಾಮಬಾಣ.








ಒಂದೆಲಗದ ಕಷಾಯ


ಬೇಕಾಗುವ ವಸ್ತುಗಳು: ಒಂದು ಹಿಡಿ ಬೇರು ಸಹಿತ ಒಂದೆಲಗದ ಎಲೆ, 1 ಚಮಚ ಕಾಳುಮೆಣಸು ಪುಡಿ, 2 ಚಮಚ ಜೇನುತುಪ್ಪ

ಮಾಡುವ ವಿಧಾನ :  2 ಕಪ್ ನೀರಿಗೆ ಬೇರು ಸಹಿತ ಸ್ವಚ್ಛವಾಗಿ ತೊಳೆದ ಒಂದೆಲಗದ ಎಲೆ, ಕಾಳುಮೆಣಸು ಪುಡಿಹಾಕಿ ಚೆನ್ನಾಗಿ 1 ಕಪ್ ಆಗುವಷ್ಟು ಕುದಿಸಿ. ನಂತರ ಇಳಿಸಿ ಶೋಧಿಸಿ, ಜೇನು ಹಾಕಿ ಸರಿಯಾಗಿ ಬೆರೆಸಿ, ಬಿಸಿಬಿಸಿಯಾಗಿ ಕುಡಿಯಿರಿ. ಇದು ಜ್ವರ ನೆಗಡಿಗಳಿಗೆ ಉತ್ತಮ ಪರಿಹಾರ.




ಕ್ಯಾರೆಟ್

ಕ್ಯಾರೆಟ್ ನ ಅಡುಗೆ

ಕ್ಯಾರೆಟ್ ಶಕ್ತಿವರ್ಧಕ ತರಕಾರಿ. ಇದನ್ನು ಸದಾಕಾಲ ಸೇವಿಸುತ್ತಿದ್ದಲ್ಲಿ ಪಚನಾಂಗಗಳಲ್ಲಿ ಹುಟ್ಟುವ ಅನೇಕ ರೋಗಗಳಿಂದ ಮುಕ್ತರಾಗಬಹುದು. ಕಣ್ಣು, ನರಮಂಡಲ, ಪಿತ್ತಕೋಶ, ಶ್ವಾಸಕೋಶ, ಮೂತ್ರಪಿಂಡಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಅನೇಕ ರೋಗಗಳಲ್ಲಿ ಹೆಚ್ಚು ಗುಣ ಕಂಡುಬರುವುದು. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವುದು.

ಕ್ಯಾರೆಟ್ ದೋಸೆ


ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ,  3 -4 ಕ್ಯಾರೆಟ್ ತುರಿ, 1/4 ಕಪ್ ಕಾಯಿತುರಿ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ನಿಂಬೆರಸ, 2 - 3 ಚಮಚ ಎಣ್ಣೆ

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು 2 - 3 ಗಂಟೆ ನೆನೆಸಿ. ನಂತರ ಚೆನ್ನಾಗಿ ತೊಳೆದು ಕ್ಯಾರೆಟ್ ತುರಿ, ಕಾಯಿತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ನಿಂಬೆರಸ ಸೇರಿಸಿ 5 - 10 ನಿಮಿಷ ಇಡಿ. ನಂತರ ತವಾ ಒಲೆಯ ಮೇಲಿಟ್ಟು ಎಣ್ಣೆಪಸೆ ಮಾಡಿ. 1 ಸೌಟು ಹಿಟ್ಟು ಎರೆದು ತೆಳ್ಳಗೆ ಹರಡಿ ಮುಚ್ಚಿ. ಬೆಂದಾಗ ಕವುಚಿ ಹಾಕಿ ತೆಗೆಯಿರಿ. ಈಗ ಆರೋಗ್ಯಕರವಾದ ದೋಸೆ ಸವಿಯಲು ಸಿದ್ಧ.






ಕ್ಯಾರೆಟ್ ರೊಟ್ಟಿ


ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ,  2 ಕ್ಯಾರೆಟ್ ತುರಿ, 1/4 ಕಪ್ ಕಾಯಿತುರಿ, 1 - 2 ಹಸಿಮೆಣಸು, 1 ಈರುಳ್ಳಿ, ಚಿಟಿಕಿ ಅರಸಿನ, 1/2 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ತುಪ್ಪ

ಮಾಡುವ ವಿಧಾನ: ಅಕ್ಕಿಯನ್ನು ೨-೩ ಗಂಟೆ ನೆನೆಸಿ ತೊಳೆದು ತರಿತರಿಯಾಗಿ ರುಬ್ಬಿ. ನಂತರ ಕ್ಯಾರೆಟ್ ತುರಿ, ತೆಂಗಿನ ತುರಿ, ಹಸಿಮೆಣಸು ಚೂರು, ಈರುಳ್ಳಿ ಚೂರು, ಅರಸಿನ, ಉಪ್ಪು, ಮೊಸರು ಸೇರಿಸಿ ಕಲಸಿ. ತವಾ ಒಲೆಯ ಮೇಲಿಟ್ಟು ಬಿಸಿಯಾದಾಗ ೧ ಸೌಟು ಹಿಟ್ಟು ಹಾಕಿ ಹರಡಿ ಮುಚ್ಚಿಡಿ. ನಂತರ ತುಪ್ಪ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ರುಚಿಯಾದ ಪೌಷ್ಠಿಕ ರೊಟ್ಟಿಯನ್ನು ಚಟ್ನಿಯೊಂದಿಗೆ ಸವಿಯಿರಿ.





ಕ್ಯಾರೆಟ್ ಉಂಡೆ


ಬೇಕಾಗುವ ವಸ್ತುಗಳು: 2 ಕಪ್ ಕ್ಯಾರೆಟ್ ತುರಿ, 1 ಕಪ್ ಚಿರೋಟಿ ರವೆ,  ಒಂದುವರೆ ಕಪ್ ಸಕ್ಕರೆ ಪುಡಿ, 10-12 ಗೋಡಂಬಿ, 11-12 ಒಣದ್ರಾಕ್ಷೆ, 1/4 ಕಪ್ ತುಪ್ಪ,  1/2 ಚಮಚ ಏಲಕ್ಕಿ ಪುಡಿ

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ತುಪ್ಪ ಹಾಕಿ ಕ್ಯಾರೆಟ್ ತುರಿ ಹಾಕಿ ಸ್ವಲ್ಪ ಹುರಿದು ಕೆಳಗಿಳಿಸಿ. ನಂತರ ಗೋಡಂಬಿ ದ್ರಾಕ್ಷಿ ತುಪ್ಪದಲ್ಲಿ ಹುರಿದು ಸಕ್ಕರೆ ಪುಡಿ, ಏಲಕ್ಕಿ ಪುಡಿ, ಹುರಿದ ಕ್ಯಾರೆಟ್, ಹುರಿದ ರವೆ ಎಲ್ಲಾ ಬೆರೆಸಿ, ಬಿಸಿಯಿರುವಾಗಲೇ ಉಂಡೆ ಮಾಡಿ. ರುಚಿಯಾದ ಈ ಉಂಡೆಯನ್ನು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ.