ಬಾಳೆ ಕುಂಡಿಗೆಯ ರುಚಿಕರ ಅಡುಗೆಗಳು
ಬಾಳೆ ಕುಂಡಿಗೆಯ ಪಲ್ಯ ಸೇವಿಸುವುದರಿಂದ ಆಮಾಂಶ ರೋಗ ಗುಣವಾಗುವುದು. ಬಾಳೆ ಕುಂಡಿಗೆ ಪಲ್ಯ ತಯಾರಿಸಿ ಮೊಸರು ಬೆರೆಸಿ ಊಟ ಮಾಡಿದರೆ, ಮುಟ್ಟಿನ ನಂತರ ಅಧಿಕ ಸ್ರಾವವಾಗುತ್ತಿದ್ದರೆ ಗುಣವಾಗುವುದು. ಮೂತ್ರವಿಸರ್ಜನೆ ಸಾಕಷ್ಟು ಪ್ರಮಾಣದಲ್ಲಿ ಆಗದಿರುವಾಗ ಬಾಳೆಕುಂಡಿಗೆಯ ರಸವನ್ನು ಒಂದು ಬಟ್ಟಲು ಸೌತೆಕಾಯಿ ರಸದೊಂದಿಗೆ ಬೆರೆಸಿ ಕೊಡುವುದು ಒಳ್ಳೆಯದು.
ಬಾಳೆ ಕುಂಡಿಗೆಯ ರೊಟ್ಟಿ

ಮಾಡುವ ವಿಧಾನ: ಸಣ್ಣಗೆ ಚೂರು ಮಾಡಿದ ಕುಂಡಿಗೆಯನ್ನು ನೀರು ಬೆರೆಸಿದ ಮಜ್ಜಿಗೆಯಲ್ಲಿ ಹಾಕಿ 1-2 ಗಂಟೆ ಇಡಿ. ನಂತರ ಅಕ್ಕಿ ಹಿಟ್ಟು, ರಾಗಿಹಿಟ್ಟು, ರವೆ, ನೀರಿನಿಂದ ತೆಗೆದ ಕುಂಡಿಗೆ ಚೂರು, ಕ್ಯಾರೆಟ್ ತುರಿ, ಈರುಳ್ಳಿ ಚೂರು, ಕೊತ್ತಂಬರಿ ಸೊಪ್ಪಿನ ಚೂರು, ತೆಂಗಿನ ತುರಿ, ಹಸಿಮೆಣಸು ಚೂರು, ಉಪ್ಪು, ಮತ್ತು ಮೊಸರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಉಂಡೆಮಾಡಿ ಎಣ್ಣೆಪಸೆ ಮಾಡಿದ ಬಾಳೆಲೆಯಲ್ಲಿ ತಟ್ಟಿ. ತವಾ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ತಟ್ಟಿದ ರೊಟ್ಟಿ ಹಾಕಿ ಎರಡೂ ಬದಿ ಕೆಂಪಗೆ ಬೇಯಿಸಿ. ಆರೋಗ್ಯಕರವಾದ ರೊಟ್ಟಿಯನ್ನು ಬೆಲ್ಲ ಯಾ ಚಟ್ನಿಯೊಂದಿಗೆ ಸವಿಯಿರಿ.
ಬಾಳೆಕುಂಡಿಗೆ ಸಾರು

ಮಾಡುವ ವಿಧಾನ: ಬಾಳೆಕುಂಡಿಗೆಯ ಮೇಲಿನ 2 ಸಿಪ್ಪೆ ಸುಲಿದು ಉಳಿದ ಭಾಗಗಳನ್ನು ಹೆಚ್ಚಿ ನೀರಲ್ಲಿ ಹಾಕಿ. ನಂತರ ಹುಳಿ, ಉಪ್ಪು, ಬೆಲ್ಲ, ಕೆಂಪುಮೆಣಸು, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಬಳಿಕ ರುಬ್ಬಿ. ನಂತರ ಬೇಕಾದಷ್ಟು ನೀರು ಸೇರಿಸಿ ಒಂದು ಕುದಿ ಕುದಿಸಿ. ಬಳಿಕ ತುಪ್ಪದಲ್ಲಿ ಸಾಸಿವೆ, ಒಣಮೆಣಸು, ಕರಿಬೇವು, ಬೆಳ್ಳುಳ್ಳಿಯ ಒಗ್ಗರಣೆ ಕೊಡಿ. ಈ ಸಾರು ಊಟಕ್ಕೆ ರುಚಿ, ಆರೋಗ್ಯಕ್ಕೂ ಉತ್ತಮ.
ಬಾಳೆಕುಂಡಿಗೆ ಮೆಣಸುಕಾಯಿ

ಮಾಡುವ ವಿಧಾನ: ಸಣ್ಣಗೆ ಹೆಚ್ಚಿದ ಬಾಳೆಕುಂಡಿಗೆ ಚೂರನ್ನು ನೀರು ಯಾ ಮಜ್ಜಿಗೆ ನೀರಲ್ಲಿ 15 ರಿಂದ 20 ನಿಮಿಷ ಹಾಕಿಡಿ. ನಂತರ ನೀರು ಬಸಿದು ಉಪ್ಪು, ಬೆಲ್ಲ, ಹುಳಿ, ಮೆಣಸಿನ ಪುಡಿ, ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಎಳ್ಳು, ಕೊತ್ತಂಬರಿ, ಉದ್ದಿನಬೇಳೆ, ಕೆಂಪುಮೆಣಸು ಎಣ್ಣೆ ಹಾಕಿ ಪರಿಮಳ ಬರುವವರೆಗೆ ಹುರಿದು ಕಾಯಿತುರಿ ಅರಸಿನ ಸೇರಿಸಿ ರುಬ್ಬಿ. ನಂತರ ಬೆಂದ ಕುಂಡಿಗೆ ಹೋಳುಗಳಿಗೆ ಸೇರಿಸಿ, ಬೇಕಾದಷ್ಟು ನೀರು ಸೇರಿಸಿ ಒಲೆಯಲ್ಲಿಟ್ಟು ಕುದಿಸಿ. ನಂತರ ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ.
ಬಾಳೆಕುಂಡಿಗೆ ಪತ್ರೊಡೆ

ಮಾಡುವ ವಿಧಾನ: ಸಣ್ಣಗೆ ಹೆಚ್ಚಿದ ಕುಂಡಿಗೆ ಚೂರುಗಳನ್ನು ನೀರಲ್ಲಿ ಹಾಕಿ ಸ್ವಲ್ಪ ಹೊತ್ತು ಇಡಿ. ನಂತರ ಕಾಯಿತುರಿ, ಬೆಲ್ಲ, ಹುಳಿ, ಒಣಮೆಣಸು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ನೆನೆಸಿದ ಅಕ್ಕಿ ತೊಳೆದು ರುಬ್ಬಿದ ಮಸಾಲೆ ಅರಸಿನ ಸೇರಿಸಿ ತರಿತರಿಯಾಗಿ ರುಬ್ಬಿ. ನಂತರ ನೀರಿನಿಂದ ತೆಗೆದ ಕುಂಡಿಗೆ ಚೂರು, ಉಪ್ಪು ಸೇರಿಸಿ ಸರಿಯಾಗಿ ಬೆರೆಸಿ. ಬಾಡಿಸಿದ ಬಾಳೆಲೆಯಲ್ಲಿ ಎರಡು ಸೌಟು ಹಿಟ್ಟು ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಒಂದು ಗಂಟೆ ಬೇಯಿಸಿದರೆ ರುಚಿಯಾದ ಆರೋಗ್ಯಕರವಾದ ಪತ್ರೊಡೆ ಸವಿಯಲು ಸಿದ್ಧ.