ಕೊತ್ತಂಬರಿ ಸೊಪ್ಪಿನ ಪೌಷ್ಟಿಕ ಅಡುಗೆಗಳು
ಕೊತ್ತಂಬರಿ ಸೊಪ್ಪಿನಲ್ಲಿ ಅಧಿಕ ಕಬ್ಬಿಣಾಂಶವಿರುವುದರಿಂದ, ರಕ್ತಹೀನತೆಯಿಂದ ಬಳಲುವವರು ಪ್ರತಿದಿನ ಆಹಾರದಲ್ಲಿ ಇದನ್ನು ಮೂರು ಚಮಚ ಕೊತ್ತಂಬರಿಸೊಪ್ಪಿನ ರಸವನ್ನು ಜೇನಿನೊಂದಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು. ಊಟದ ನಂತರ ಒಂದು ಲೋಟ ಮಜ್ಜಿಗೆಗೆ ಕೊತ್ತಂಬರಿ ಸೊಪ್ಪು ಯಾ ಸೊಪ್ಪಿನ ರಸ ಹಾಕಿ ಕುಡಿದರೆ ಆಹಾರವು ಸುಲಭವಾಗಿ ಜೀರ್ಣವಾಗುವುದಲ್ಲದೇ ಹೊಟ್ಟೆಯುಬ್ಬರ ಕಾಡುವುದಿಲ್ಲ.ಕೊತ್ತಂಬರಿಸೊಪ್ಪಿನ ಸ್ಪೆಷಲ್ ಚಟ್ನಿ

ಮಾಡುವ ವಿಧಾನ: ಕೊತ್ತಂಬರಿಸೊಪ್ಪು ಸ್ವಚ್ಛವಾಗಿ ತೊಳೆದು ಬಿಡಿಸಿಟ್ಟುಕೊಳ್ಳಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಕೊತ್ತಂಬರಿಸೊಪ್ಪು ಹಾಕಿ ಹುರಿದು, ನಂತರ ಕೆಳಗಿಳಿಸಿ. ನಂತರ ಉದ್ದಿನಬೇಳೆ, ಕಡಲೆಬೇಳೆ, ಜೀರಿಗೆ ಕೆಂಪುಮೆಣಸು ಹಾಕಿ ಹುರಿದು ಕೆಳಗಿಳಿಸಿ. ನಂತರ ಹುಳಿರಸ, ಉಪ್ಪು, ಬೆಲ್ಲ, ಒಣಕೊಬ್ಬರಿ ತುರಿ, ಹುರಿದ ಮಸಾಲೆ, ಕೊತ್ತಂಬರಿಸೊಪ್ಪು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನೀರು ಹಾಕಬಾರದು. ಇದನ್ನು 1 ವಾರ ಹಾಳಾಗದೆ ಇಡಬಹುದು. ಅನ್ನ, ರೊಟ್ಟಿ ಚಪಾತಿ ಜೊತೆ ತಿನ್ನಲು ರುಚಿ.
ಕೊತ್ತಂಬರಿಸೊಪ್ಪಿನ ದೋಸೆ

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿ, ತೊಗರಿಬೇಳೆ, 2-3 ಗಂಟೆ ನೆನೆಸಿ. ನಂತರ ತೊಳೆದು, ಹಸಿಮೆಣಸು, ತೊಳೆದ ಕೊತ್ತಂಬರಿಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ನೀರುಳ್ಳಿ ಚೂರು, ರವೆ, ಮೊಸರು, ಜೀರಿಗೆ ಸೇರಿಸಿ 1/2 ಗಂಟೆ ಇಡಿ. ನಂತರ ಉಪ್ಪು ಸೇರಿಸಿ ದೋಸೆ ಹದಕ್ಕೆ ಕಲಸಿ. ಬಿಸಿಯಾದ ತವಾದ ಮೇಲೆ ಎಣ್ಣೆ ಹಾಕಿ ದೋಸೆ ಹುಯಿದು, 2 ಬದಿ ಬೇಯಿಸಿ ತೆಗೆಯಿರಿ. ಬಿಸಿಯಿರುವಾಗಲೇ ತುಪ್ಪ ಹಾಕಿ ತಿನ್ನಿ.
ಕೊತ್ತಂಬರಿಸೊಪ್ಪಿನ ತಂಬುಳಿ

ಮಾಡುವ ವಿಧಾನ: ಕೊತ್ತಂಬರಿಸೊಪ್ಪು ಬೇರು ಮತ್ತು ಬಲಿತ ದಂಟು ತೆಗೆದು ಎಳೆಯ ದಂಟು ಮತ್ತು ಸೊಪ್ಪನ್ನು ತೊಳೆದು, ಹಸಿಮೆಣಸು, ಕಾಯಿತುರಿ ಜೊತೆ ಸೇರಿಸಿ ನುಣ್ಣಗೆ ರುಬ್ಬಿ. ಉಪ್ಪು ಮತ್ತು ಮಜ್ಜಿಗೆ ಬೆರೆಸಿ, ತುಪ್ಪದಲ್ಲಿ ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಕೊಡಿ.
ಕೊತ್ತಂಬರಿಸೊಪ್ಪಿನ ಭಾತ್

ಮಾಡುವ ವಿಧಾನ: ಕೊತ್ತಂಬರಿಸೊಪ್ಪು, 1/2 ನೀರುಳ್ಳಿ ಚೂರು, ಬೆಳ್ಳುಳ್ಲಿ, ಶುಂಠಿ, ತೆಂಗಿನತುರಿ, ಹಸಿಮೆಣಸು ಸೇರಿಸಿ ರುಬ್ಬಿ, ನಂತರ ಬಾಣಲೆ ಒಲೆಯಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ, ಸಿಡಿದಾಗ ಉದ್ದಿನಬೇಳೆ ಹಾಕಿ, ಕೆಂಪಾದಾಗ ಉಳಿದ ನೀರುಳ್ಳಿ ಚೂರು ಹಾಕಿ ಸ್ವಲ್ಪ ಹುರಿದು, ರುಬ್ಬಿದ ಮಸಾಲೆ ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿದು, ಮಾಡಿಟ್ಟ ಅನ್ನ ಹಾಕಿ ತೊಳಸಿ. ಉಪ್ಪು ಹಾಕಿ ಬೆರೆಸಿ ಒಲೆಯಿಂದ ಕೆಳಗಿಳಿಸಿ. ಈಗ ರುಚಿಯಾದ ಕೊತ್ತಂಬರಿಸೊಪ್ಪಿನ ಭಾತ್ ಸವಿಯಲು ಸಿದ್ಧ.