ಅಲಸಂಡೆಯ ರುಚಿಕರ ಅಡುಗೆಗಳು
ಅಲಸಂಡೆಯನ್ನು ಹಿತಮಿತವಾಗಿ ಸೇವಿಸುವುದರಿಂದ ದೇಹದ ಬಲ ಹೆಚ್ಚುವುದು. ಹಸಿ ಅಲಸಂಡೆಯನ್ನು ಬೇಯಿಸದೆ ತಿನ್ನುವುದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚುವುದು. ಆದರೆ ಮಿತವಾಗಿ ತಿನ್ನಬೇಕು.
ಎಳೆ ಅಲಸಂಡೆಕಾಯಿಯ ಚಟ್ನಿ

ಮಾಡುವ ವಿಧಾನ: ಅಲಸಂಡೆಕಾಯಿಯನ್ನು ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿ. ನಂತರ ತೆಂಗಿನತುರಿ, ಹುಳಿರಸ, 1/2 ಚಮಚ ಸಾಸಿವೆ, ಹಸಿಮೆಣಸು, 1/2 ಚಮಚ ಜೀರಿಗೆ, ಇಂಗು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಒಣಮೆಣಸು ಸೇರಿಸಿ ಒಗ್ಗರಣೆ ಕೊಡಿ. ಈ ಚಟ್ನಿ ತುಂಬಾ ರುಚಿಕರವಾಗಿದ್ದು ಅನ್ನ ಚಪಾತಿ ಜೊತೆ ಸವಿಯಲು ಚೆನ್ನಾಗಿರುತ್ತದೆ.
ಎಳೆ ಅಲಸಂಡೆಕಾಯಿಯ ಚಿತ್ರಾನ್ನ

ಮಾಡುವ ವಿಧಾನ: ಮೊದಲು ತುಂಡುಮಾಡಿದ ಅಲಸಂಡೆಗೆ ಸ್ವಲ್ಪ ನೀರು ಉಪ್ಪು ಹಾಕಿ ಬೇಯಿಸಿ. ನಂತರ ಬಾಣಲೆ ಒಲೆಯಮೇಲಿಟ್ಟು ಎಣ್ಣೆ ಹಾಕಿ ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು ಹಾಕಿ ಸ್ವಲ್ಪ ಹುರಿದು, ಉದ್ದಿನಬೇಳೆ, ಕಡಲೆಬೇಳೆ ಕೆಂಪಗಾದಾಗ, ಸೀಳೆದ ಹಸಿಮೆಣಸು, ಅರಸಿನ, ಹುರಿದ ನೆಲಕಡಲೆಬೀಜ, ಗೋಡಂಬಿ ಹಾಕಿ ಸ್ವಲ್ಪ ಹುರಿದು, ಬೇಯಿಸಿದ ಅನ್ನ, ತೆಂಗಿನ ತುರಿ ಹಾಕಿ ತೊಳಸಿ. ಸ್ವಲ್ಪವೇ ಉಪ್ಪು, ನಿಂಬೆರಸ ಹಾಕಿ ತೊಳಸಿ. ನಂತರ ಒಲೆಯಿಂದ ಕೆಳಗಿಳಿಸಿ. ಗೋಡಂಬಿ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಮಕ್ಕಳಿಗೆ ಈ ಚಿತ್ರಾನ್ನ ಇಷ್ಟವಾಗುತ್ತದೆ.
ಅಲಸಂಡೆಕಾಯಿಯ ಮಸಾಲೆ ಪಲ್ಯ

ಮಾಡುವ ವಿಧಾನ: ಮೊದಲು ತೆಂಗಿನತುರಿ, ಕೆಂಪುಮೆಣಸು, ಕೊತ್ತಂಬರಿ, ಚಿಟಿಕಿ ಸಾಸಿವೆ ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿ. ನಂತರ ಬಾಣಲೆ ಒಲೆಯಮೇಲಿಟ್ಟು ಎಣ್ಣೆಹಾಕಿ, ಬಿಸಿಯಾದಾಗ ಅನುಕ್ರಮವಾಗಿ ಸಾಸಿವೆ ಉದ್ದಿನಬೇಳೆ, ಕರಿಬೇವು ಹಾಕಿ ಸ್ವಲ್ಪ ಹುರಿದು, ನೀರು, ಕೆಂಪುಮೆಣಸಿನ ಹುಡಿ, ಅರಸಿನ, ಬೆಲ್ಲ, ಉಪ್ಪು ಹಾಕಿ ಬೇಯಿಸಿ. ನಂತರ ನೀರೆಲ್ಲಾ ಆರುತ್ತಾ ಬಂದಾಗ ರುಬ್ಬಿದ ಮಸಾಲೆ ಹಾಕಿ ಸ್ವಲ್ಪ ಹೊತ್ತು ತೊಳಸಿ ಕೆಳಗಿಳಿಸಿ. ಈ ಪಲ್ಯ ಅನ್ನ, ಚಪಾತಿ, ಪರೋಟದ ಜೊತೆ ತಿನ್ನಲು ರುಚಿಕರ. ಈ ಪಲ್ಯ ಸ್ವಲ್ಪ ಸಿಹಿಯಾದರೆ ರುಚಿ ಜಾಸ್ತಿ.