ಕಾಡು ಮಾವಿನ ಹಣ್ಣಿನ ರುಚಿಕರ ಅಡುಗೆಗಳು
ಈಗ ಕಾಡು ಮಾವು ಧಾರಾಳವಾಗಿ ಸಿಗುವ ಕಾಲ. ಮಾವುನಲ್ಲಿ "ಸಿ" "ಬಿ" ಜೀವಸತ್ವ ಹೇರಳವಾಗಿದೆ. ಕಸಿ ಮಾವು ಜಾಸ್ತಿ ತಿಂದರೆ ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ಕಾಡು ಮಾವು ತಿಂದಷ್ಟೂ ಹಸಿವು ಜಾಸ್ತಿ. ಈಗೀಗ ಕಾಡುಮಾವಿನ ಸಂತತಿ ಕಡಿಮೆಯಾಗುತ್ತಿದೆ. ಈ ಮಾವಿನ ಗೊಜ್ಜು ಪಲ್ಯ ತಿಂದಾಗ, ಅದರ ಗೊರಟನ್ನು ಚೀಪಿದಾಗ ಆಗುವ ತೃಪ್ತಿ ಬೇರೆ ಮಾವಿನಲ್ಲಿ ಸಿಗದು. ಉಪ್ಪಿನಕಾಯಿಗೆ, ಮಾಂಬಳಕ್ಕೆ ಕಾಡು ಮಾವೇ ಸೂಕ್ತ. ಮುಂದಿನ ಪೀಳಿಗೆಗೆ ಕಾಡು ಮಾವಿನ ವಿಶೇಷತೆಯ ಅರಿವು ಮೂಡಿಸಬೇಕಿದೆ. ಆದಷ್ಟು ಮರ ಕಡಿಯದೆ ಅದರ ಸಂತತಿ ಉಳಿಸಲು ಪ್ರಯತ್ನಿಸೋಣ.ಕಾಡು ಮಾವಿನ ಹಣ್ಣಿನ ಪಾಯಸ
ಬೇಕಾಗುವ ವಸ್ತುಗಳು: 5-6 ಕಾಡುಮಾವಿನ ಹಣ್ಣು, 4-5 ಅಚ್ಚುಬೆಲ್ಲ, 3 ಕಪ್ ತೆಂಗಿನ ತುರಿ, 2-3 ಚಮಚ ಅಕ್ಕಿ ಹಿಟ್ಟು, ಚಿಟಿಕಿ ಉಪ್ಪು.ಮಾಡುವ ವಿಧಾನ: ಕಾಡುಮಾವಿನ ಹಣ್ಣಿನ ತೊಟ್ಟು ತೆಗೆದು, ತೊಳೆದು ಸುಲಿಯಿರಿ. ಗೊರಟಿನಿಂದ ರಸವನ್ನು ಕಿವುಚಿ ಹಿಂಡಿಕೊಳ್ಳಿ. ಕಾಯಿ ತುರಿದು ರುಬ್ಬಿ ದಪ್ಪ ಹಾಲು ಹಿಂಡಿ ಬೇರೆ ಇಡಿ. ಮತ್ತೆರಡು ಬಾರಿ ಹಿಂಡಿದ ಹಾಲನ್ನು ಮಾವಿನ ರಸಕ್ಕೆ ಬೆರೆಸಿ. ನಂತರ ಒಲೆಯ ಮೇಲಿಟ್ಟು ಉಪ್ಪು ಬೆಲ್ಲ ಹಾಕಿ ಕುದಿಸಿ. 5-10 ನಿಮಿಷ ಕುದಿದ ನಂತರ ಅಕ್ಕಿ ಹಿಟ್ಟು ನೀರಲ್ಲಿ ಕದಡಿ, ಪಾಯಸ ದಪ್ಪವಾಗುವುದಕ್ಕೆ ಬೇಕಾದಷ್ಟು ಅಕ್ಕಿ ಹಿಟ್ಟು ಪಾಯಸಕ್ಕೆ ಹಾಕಿ ಚೆನ್ನಾಗಿ ಕುದಿಸಿ. ಆಗಾಗ ಸೌಟಿನಿಂದ ಮೊಗಚುತ್ತಾ ಇರಬೇಕು. ನಂತರ ದಪ್ಪ ಹಾಲು ಹಾಕಿ ಒಂದು ಕುದಿ ಕುದಿಸಿ ಒಲೆಯಿಂದ ಇಳಿಸಿ. ಮಾವಿನಹಣ್ಣಿನ ಹುಳಿ ನೋಡಿಕೊಂಡು ಬೆಲ್ಲ ಹಾಕಬೇಕು. ಅಕ್ಕಿ ಹಿಟ್ಟಿನ ಬದಲು ಅಕ್ಕಿ ನೆನೆಸಿ ರುಬ್ಬಿಯೂ ಹಾಕಬಹುದು. ರುಚಿಯಾದ ಈ ಪಾಯಸ ತಿಂದಷ್ಟೂ ತಿನ್ನಬೇಕೆನಿಸುತ್ತದೆ.
ಕಾಡು ಮಾವಿನ ಹಣ್ಣಿನ ತೊಕ್ಕು

ಮಾಡುವ ವಿಧಾನ: ಕಾಡುಮಾವಿನ ಹಣ್ಣಿನ ತೊಟ್ಟು ತೆಗೆದು, ತೊಳೆದು, ಸುಲಿದು, ಕಿವುಚಿ, ದಪ್ಪ ತಳದ ಬಾಣಲೆಗೆ ಹಿಂಡಿ. ಉಪ್ಪು ಮತ್ತು ಕೆಂಪುಮೆಣಸಿನ ಪುಡಿ ಸೇರಿಸಿ ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಬೇಯಿಸಿ. ಇದು ಬೇಯುತ್ತಿದ್ದಂತೆ ಗಟ್ಟಿಯಾಗುತ್ತಾ ಬರುವಾಗ ಒಲೆಯಿಂದ ಇಳಿಸಿ. 2-3 ತಿಂಗಳು ಇದು ಹಾಳಾಗದು. ಅನ್ನದ ಜೊತೆ ಹೆಚ್ಚಿದ ಈರುಳ್ಳಿ, ಎಣ್ಣೆ ಹಾಕಿ ತಿಂದರೆ ಇದು ಬಲು ರುಚಿ.
ಮಾವಿನ ಹಣ್ಣಿನ ಗಸಿ

ಮಾಡುವ ವಿಧಾನ: ತೆಂಗಿನ ತುರಿ, ಹುರಿದ ಒಣಮೆಣಸು ಸೇರಿಸಿ, ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿ. ತೆಗೆಯುವ ಮೊದಲು ಕೊತ್ತಂಬರಿ, ಉದ್ದಿನಬೇಳೆ ಎಣ್ಣೆಯಲ್ಲಿ ಹುರಿದು ಅದಕ್ಕೆ ಹಾಕಿ ಎರಡು ಸುತ್ತು ರುಬ್ಬಿ. ಮಾವಿನ ಹಣ್ಣು ತೊಳೆದು, ಅದರ ತುದಿಭಾಗದಲ್ಲಿ ಗಾಯ ಮಾಡಿ, ಸ್ವಲ್ಪ ನೀರು, ಬೆಲ್ಲ ಸೇರಿಸಿ ಬೇಯಿಸಿ. ನಂತರ ರುಬ್ಬಿದ ಮಸಾಲೆ, ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಸಣ್ಣ ತುಂಡು ಕೆಂಪು ಮೆಣಸು ಹಾಕಿ ಒಗ್ಗರಣೆ ಕೊಡಿ. ಈ ಗಸಿ ಸಾಂಬಾರಿಗಿಂತ ತುಸು ದಪ್ಪಗಿರಬೇಕು. ಅನ್ನ ಚಪಾತಿ ಜೊತೆ ತಿನ್ನಲು ರುಚಿ.