ದೀಪಾವಳಿ ಹಬ್ಬದ ವಿಶೇಷ ಖಾದ್ಯಗಳು
ಮತ್ತೆ ದೀಪಾವಳಿ ಬಂದಿದೆ. ಹೊಸ ಬಟ್ಟೆ ಧರಿಸಿ, ಪಟಾಕಿ ಸುಡುಮದ್ದು ಸಿಡಿಸಿ, ಸಿಹಿ ಖಾದ್ಯ ತಿನ್ನುವ ಸಂಭ್ರಮ. ಆದರೆ, ಈ ಬಾರಿ ವಾಯುಮಾಲಿನ್ಯ, ಶಬ್ದಮಾಲಿನ್ಯಗಳನ್ನುಂಟುಮಾಡುವ ಪಟಾಕಿ ಸುಡುಮದ್ದುಗಳನ್ನು ಸಿಡಿಸದೆ, ದೀಪ ಬೆಳಗಿಸಿ ಸರಳವಾಗಿ ಮನೋಹ್ಲಾದವುಂಟುಮಾಡುವ ದೀಪಾವಳಿ ಆಚರಿಸೋಣ. ವಾತಾವರಣ ಕಲುಷಿತಗೊಳಿಸದೆ ಹಬ್ಬ ಆಚರಿಸೋಣ.ಅಕ್ಕಿ ಮುಳ್ಳುಸೌತೆ ಖಾರದ ಕಡ್ಡಿ

ಮಾಡುವ ವಿಧಾನ: 2-3 ಗಂಟೆ ನೆನೆಸಿದ ಅಕ್ಕಿ ಚೆನ್ನಾಗಿ ತೊಳೆದು, ಸಿಪ್ಪೆ ತಿರುಳು ತೆಗೆದು, ಸಣ್ಣಗೆ ತುಂಡು ಮಾಡಿದ ಮುಳ್ಳುಸೌತೆ, ಹಸಿಮೆಣಸು, ಜೀರಿಗೆ, ಎಳ್ಳು ಸೇರಿಸಿ ನಯವಾಗಿ ರುಬ್ಬಿ. ನಂತರ ಬಾಣಲೆ ಒಲೆಯ ಮೇಲಿಟ್ಟು ರುಬ್ಬಿದ ಹಿಟ್ಟು ಹಾಕಿ, ಹದ ಉರಿಯಲ್ಲಿ ತಿರುಗಿಸುತ್ತಾ ಇರಿ. ಉಪ್ಪು ಹಾಕಿ ಮಿಶ್ರಣ ಗಟ್ಟಿಯಾದ ನಂತರ ಕೆಳಗಿಳಿಸಿ. ಅಕ್ಕಿ ಹಿಟ್ಟು, ಎಣ್ಣೆ ಹಾಕಿ ಚೆನ್ನಾಗಿ ನಾದಿ. ಚಕ್ಕುಲಿ ಮುಟ್ಟಿನ ಖಾರದಕಡ್ಡಿ ಅಚ್ಚಿಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿಗರಿಯಾದ ಖಾರದ ಕಡ್ಡಿ ಸವಿಯಲು ಸಿದ್ಧ.
ಬೂದುಕುಂಬಳ ಬೋಂಡಾ

ಮಾಡುವ ವಿಧಾನ: ಉದ್ದಿನಬೇಳೆಯನ್ನು 2-3 ಗಂಟೆ ನೆನೆಸಿ. ನಂತರ ತೊಳೆದು ನಯವಾಗಿ ರುಬ್ಬಿ, ನಂತರ ಸಿಪ್ಪೆ, ತಿರುಳು ತೆಗೆದು ಸಣ್ಣಗೆ ಹೆಚ್ಚಿದ ಬೂದುಕುಂಬಳ ತುಂಡು, ಸಣ್ಣಗೆ ಹೆಚ್ಚಿದ ಹಸಿಮೆಣಸು, ಕೊತ್ತಂಬರಿಸೊಪ್ಪು, ಕರಿಬೇವು, ಉಪ್ಪು, ಇಂಗು, ಜೀರಿಗೆ ಹಾಕಿ, ರುಬ್ಬಿದ ಉದ್ದಿನಹಿಟ್ಟು ಬೆರೆಸಿ ಸರಿಯಾಗಿ ಕಲಸಿ. ನಂತರ ಕೈಯಿಂದ ಸ್ವಲ್ಪ ಸ್ವಲ್ಪವೇ ತೆಗೆದು ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಬೋಂಡಾ ಸವಿದು ನೋಡಿ.
ಸೋರೆಕಾಯಿ ಕಾಶಿ ಹಲ್ವ

ಮಾಡುವ ವಿಧಾನ: ಸೋರೆಕಾಯಿಯ ತಿರುಳು ತೆಗೆದು, ದೊಡ್ಡ ಹೋಳುಗಳಾಗಿ ಹೆಚ್ಚಿ ತುರಿಮಣೆಯಲ್ಲಿ ತುರಿದು ಇಡಿ. ಬಾಣಲೆ ಒಲೆಯಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ತುರಿದ ಸೋರೆಕಾಯಿ ಹಾಕಿ ತೊಳಸಿ. ಸೋರೆಕಾಯಿ ತುರಿ ಬೆಂದ ಮೇಲೆ ಸಕ್ಕರೆ ಹಾಕಿ. ಸಕ್ಕರೆ ಕರಗಿ ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿ ತೊಳಸಿ. ಮಿಶ್ರಣ ತಳ ಬಿಡುತ್ತಾ ಬಂದಾಗ ಏಲಕ್ಕಿ ಪುಡಿ ಹಾಕಿ ತೊಳಸಿ ಕೆಳಗಿಳಿಸಿ. ಬೌಲ್ ಗೆ ಹಾಕಿ ಸವಿಯಿರಿ.
ಆಲೂ ಬರ್ಫಿ

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು, ತೆಂಗಿನ ತುರಿ ಹಾಕಿ ಸ್ವಲ್ಪ ಕೆಂಪಗಾಗುವವರೆಗೆ ಹುರಿದು ಕೆಳಗಿಳಿಸಿ. ನಂತರ ಅದೇ ಬಾಣಲೆಗೆ, ಹಾಲು ಸಕ್ಕರೆ ಹಾಕಿ. ಸಕ್ಕರೆ ಕರಗಿ ನೂಲುಪಾಕವಾದಾಗ, ಹುರಿದಿಟ್ಟ ತೆಂಗಿನತುರಿ ಹಾಕಿ, ಮಸೆದ ಆಲೂ ಹಾಕಿ ಸರಿಯಾಗಿ ತೊಳಸಿ. ಬಾಣಲೆಯಿಂದ ಮಿಶ್ರಣವೆಲ್ಲಾ ಬೆರೆತು ತಳಬಿಡುತ್ತಾ ಬಂದಾಗ ಏಲಕ್ಕಿ ಪುಡಿ ಸೇರಿಸಿ ತೊಳಸಿ. ನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ. ತಣಿದ ನಂತರ ತುಂಡು ಮಾಡಿ.