ಅಷ್ಟಮಿ ಹಬ್ಬದ ಲಾಡುಗಳು
ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತೆ ಬಂದಿದೆ. ಕೃಷ್ಣನಿಗೆ ಚಕ್ಕುಲಿ ಕೋಡುಬಳೆ ಲಾಡುಗಳೆಂದರೆ ಪಂಚಪ್ರಾಣ. ಅವನಿಗೆ ಪ್ರಿಯವಾದ ಲಾಡುಗಳನ್ನು ಮಾಡಿ, ನೈವೇದ್ಯ ಮಾಡಿ, ಅವನ ಕೃಪೆಗೆ ಪಾತ್ರರಾಗೋಣ.ಅವಲಕ್ಕಿ ಲಾಡು

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು, ಅವಲಕ್ಕಿ ಹಾಕಿ, ಕೆಂಪಗೆ ಗರಿಗರಿಯಾಗುವ ತನಕ ಹುರಿದು ಕೆಳಗಿಳಿಸಿ. ನಂತರ ಮಿಕ್ಸಿಗೆ ಹಾಕಿ ಪುಡಿಮಾಡಿ. ಇದಕ್ಕೆ ಸಕ್ಕರೆ ಪುಡಿ, ಕೊಬ್ಬರಿ ತುರಿ, ಏಲಕ್ಕಿ ಪುಡಿ ಸೇರಿಸಿ ಒಂದು ಸುತ್ತು ಮಿಕ್ಸಿಯಲ್ಲಿ ತಿರುಗಿಸಿ. ನಂತರ ಬೌಲ್ ಗೆ ಹಾಕಿ. ಬಳಿಕ ತುಪ್ಪ ಸೇರಿಸಿ ಉಂಡೆ ಕಟ್ಟಿ. ಈಗ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ಉಂಡೆ ರೆಡಿ.
ಎಳ್ಳುಂಡೆ
ಮಾಡುವ ವಿಧಾನ: ಎಳ್ಳನ್ನು ಕಲ್ಲು ಮಣ್ಣು ತೆಗೆದು ತೊಳೆದು ಬಿಸಿಲಿನಲ್ಲಿ ಮೊದಲೇ ಒಣಗಿಸಿ ಇಡಿ. ನಂತರ ಬಾಣಲೆಯಲ್ಲಿ ಸ್ವಲ್ಪ ಸ್ವಲ್ಪ ಹಾಕಿ ಹುರಿಯಿರಿ. ನಂತರ ಮಿಕ್ಸಿಗೆ ಹಾಕಿ ತರಿತರಿಯಾಗಿ ಪುಡಿಮಾಡಿ. ನಂತರ ಬೆಲ್ಲದ ಪುಡಿ ಏಲಕ್ಕಿ ಪುಡಿ ಹಾಕಿ ಒಂದು ಸುತ್ತು ತಿರುಗಿಸಿ ಬೌಲ್ ಗೆ ಹಾಕಿ. ಸ್ವಲ್ಪ ತುಪ್ಪ ಹಾಕಿ ಉಂಡೆ ಕಟ್ಟಿ. ಈಗ ರುಚಿಯಾದ ದಿಢೀರ್ ಆಗಿ ಮಾಡುವ ಎಳ್ಳುಂಡೆ ಸವಿಯಲು ಸಿದ್ದ.
ಅರಳುಂಡೆ (ಹೊದಳುಂಡೆ)

ಮಾಡುವ ವಿಧಾನ: ಅರಳನ್ನು ಕುಟ್ಟಿ ಪುಡಿಮಾಡಿ, ಯಾ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ನೀರು, ಬೆಲ್ಲ ಹಾಕಿ ತಿರುಗಿಸಿ. ಬೆಲ್ಲ ಕರಗಿ ನೂಲು ಪಾಕವಾದಾಗ ಒಲೆಯಿಂದ ಇಳಿಸಿ. ಅರಳಿನ ಪುಡಿ ಹಾಕಿ ಸರಿಯಾಗಿ ಮಗುಚಿ. ನಂತರ ಒರಳಿನಲ್ಲಿ ಹಾಕಿ ಕುಟ್ಟಬೇಕು. ಆಮೇಲೆ ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿ. ಈಗ ಸ್ವಾದಿಷ್ಟವಾದ ಲಾಡು ಸಿದ್ಧ.
ರವಾ ಲಾಡು

ಮಾಡುವ ವಿಧಾನ: ಬಾಣಲೆ ಒಲೆಯಮೇಲಿಟ್ಟು ತುಪ್ಪ ಹಾಕಿ. ಸ್ವಲ್ಪ ಕೆಂಪಗೆ ಪರಿಮಳ ಬರುವವರೆಗೆ ರವೆ ಹಾಕಿ ಹುರಿದು ಕೆಳಗಿಳಿಸಿ. ನಂತರ ಸಕ್ಕರೆ ಮಿಕ್ಸಿಯಲ್ಲಿ ಪುಡಿ ಮಾಡಿ, ಹುರಿದ ರವೆಗೆ ಬೆರೆಸಿ. ನಂತರ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷೆ, ಗೋಡಂಬಿ ಚೂರು ಎಲ್ಲ ಹಾಕಿ ಚೆನ್ನಾಗಿ ತೊಳಸಿ. ನಂತರ ಹಾಲು ಚಿಮುಕಿಸಿ ಉಂಡೆ ಕಟ್ಟಿ. ಈಗ ರವಾ ಲಾಡು ಕೃಷ್ಣನ ನೈವೇದ್ಯಕ್ಕೆ ಸಿದ್ಧ. ಬೇಕಿದ್ದರೆ ಸ್ವಲ್ಪ ಕೊಬ್ಬರಿ ತುರಿ ಉಂಡೆ ಕಟ್ಟುವಾಗ ಸೇರಿಸಬಹುದು.