ಮಾಂಬಳದಲ್ಲಿ ರುಚಿಕರ ಅಡುಗೆಗಳು
ಮಾವಿನ ಹಣ್ಣು ತುಂಬಾ ಆಗುವ ಕಾಲದಲ್ಲಿ, ಚೆನ್ನಾಗಿ ಬಲಿತ ಸಿಹಿ ಕಾಡು ಮಾವಿನಹಣ್ಣುಗಳನ್ನು ತೊಟ್ಟು ತೆಗೆದು, ತೊಳೆದು ರುಬ್ಬುವ ಕಲ್ಲಿನಲ್ಲಿ ಸಿಪ್ಪೆ ಮತ್ತು ಐಜೆಯನ್ನು ಹಾಕಿ ಮರದ ಕುಟ್ಟಾನಿಯಲ್ಲಿ ಕುಟ್ಟಿ ನಂತರ ಹಿಂಡಿ ರಸ ತೆಗೆದು, ಚಾಪೆ ಅಥವಾ ಮೊರದ ಮೇಲೆ ಬಿಳಿ ಬಟ್ಟೆ ಹಾಕಿ ಹಿಂಡಿದ ರಸ ಹಾಕಿ ಹರಡಿ ಬಿಸಿಲಿಗೆ ಎತ್ತರದ ಜಾಗದಲ್ಲಿಟ್ಟು 6 ದಿವಸ ಇಡಿ. 7ನೇ ದಿನ ಬೆಳಿಗ್ಗೆ ಬಟ್ಟೆಯಿಂದ ಮಾಂಬಳ ಮೆತ್ತಗೆ ತೆಗೆದು, ಮೊರಕ್ಕೆ ಬೇರೆ ಬಟ್ಟೆ ಹಾಕಿ ಕವುಚಿ ಹಾಕಿ. ಎರಡು ದಿನ ಮೇಲಿನ ಬದಿಗೆ ರಸ ಹಾಕಿ ಹತ್ತು ಬಿಸಿಲು ಒಣಗಿಸಿ. ನಂತರ ಮೂರುವರೆ ಇಂಚು ಚೌಕದ ತುಂಡು ಮಾಡಿ ಪೋಲಿಥಿನ್ ಕವರ್ ನಲ್ಲಿ ಹಾಕಿ ಡಬ್ಬದಲ್ಲಿ ಇಟ್ಟರೆ ಎರಡು ವರ್ಷಕ್ಕೂ ಕೆಡದು. ಸಣ್ಣ ಮಕ್ಕಳು ಚಾಕಲೇಟಿನಂತೆ ತಿನ್ನಲು ಇಷ್ಟಪಡುತ್ತಾರೆ.ಮಾಂಬಳ ಸಾಸಿವೆ

ಮಾಡುವ ವಿಧಾನ: ಮಾಂಬಳವನ್ನು 1/2 ಕಪ್ ನೀರು ಹಾಕಿ ಬೆಲ್ಲ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಿವುಚಿ ಇಡಿ. ನಂತರ ತೆಂಗಿನ ತುರಿ, ಸಾಸಿವೆ, 1 ಒಣಮೆಣಸು ಸೇರಿಸಿ ನುಣ್ಣಗೆ ರುಬ್ಬಿ, ಕಿವುಚಿಟ್ಟ ಮಾಂಬಳಕ್ಕೆ ಬೆರೆಸಿ. ಈಗ ರುಚಿಯಾದ ಮಾಂಬಳ ಸಾಸಿವೆ ಅನ್ನದೊಂದಿಗೆ ಬೆರೆಸಿ ಉಣ್ಣಲು ಸಿದ್ಧ.
ಮಾಂಬಳ ಸಿಹಿ ತಂಬುಳಿ

ಮಾಡುವ ವಿಧಾನ: ಮಾಂಬಳವನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ, ಒಣಮೆಣಸು ಹುರಿದು ಕಾಯಿತುರಿ ಸೇರಿಸಿ ರುಬ್ಬಿ ಮಾಂಬಳವನ್ನು ಬೆಲ್ಲವನ್ನು ಸೇರಿಸಿ ಪುನಹ ನುಣ್ಣಗೆ ರುಬ್ಬಿ. ಮಜ್ಜಿಗೆ ಮತ್ತು ಉಪ್ಪು ಸೇರಿಸಿ ಬೇಕಾದಷ್ಟು ತೆಳ್ಳಗೆ ಮಾಡಿ, ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಕೊಡಿ. ಈಗ ರುಚಿಯಾದ ಪೌಷ್ಠಿಕ ಸಿಹಿ ತಂಬುಳಿಯನ್ನು ಅನ್ನದೊಂದಿಗೆ ಸವಿಯಿರಿ.
ಮಾಂಬಳ ಗೊಜ್ಜು

ಮಾಡುವ ವಿಧಾನ: ಮಾಂಬಳವನ್ನು ಸಣ್ಣಗೆ ತುಂಡು ಮಾಡಿ ನೀರಿಗೆ ಹಾಕಿ. ನಂತರ ಬೆಲ್ಲ ಉಪ್ಪು ಹಾಕಿ, ಹಸಿಮೆಣಸು ಹೆಚ್ಚಿ ಹಾಕಿ 5-10 ನಿಮಿಷ ಕುದಿಸಿ. ನಂತರ ಇಳಿಸಿ ಎಣ್ಣೆಯಲ್ಲಿ ಸಾಸಿವೆ ಒಣಮೆಣಸಿನ ಒಗ್ಗರಣೆ ಕೊಡಿ.